ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ರಥೋತ್ಸವ ಹಾಗೂ ದೇವಸ್ಥಾನದಲ್ಲಿ ನಡೆಯುವ ಪೂಜೆಗಳಿಗೆ ಭಕ್ತರ ಸೋಗಿನಲ್ಲಿ ಬಂದು ಮಹಿಳೆಯರ ಸರ ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ನಾಲ್ವರು ಮಹಿಳೆಯರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಶಾ(30), ಯಶೋದಾ(55), ಗಾಯತ್ರಿ(34) ಮತ್ತು ಪ್ರಿಯಾ(33) ಬಂಧಿತರು.
ಆರೋಪಿಗಳಿಂದ ₹ 14 ಲಕ್ಷ ವೌಲ್ಯದ 140 ಗ್ರಾಂ ಚಿನ್ನದ ಮೂರು ಸರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬಾಣಸವಾಡಿಯಲ್ಲಿ ಜೂನ್ 30ರಂದು ಶ್ರೀಜಗನ್ನಾಥಸ್ವಾಮಿ ರಥೋತ್ಸವ ನಡೆಯುತ್ತಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ವೇಳೆ ಆರೋಪಿಗಳು ಭಕ್ತರ ಸೋಗಿನಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದು 48 ಗ್ರಾಂ ತೂಕದ ಮಾಂಗಲ್ಯ ಸರ ಕಳವು ಮಾಡಿ ಪರಾರಿಯಾಗಿದ್ದರು.
ಮಹಿಳೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿಯ ಹುಸ್ಕೂರು ಗೇಟ್ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಿಚಾರಣೆ ವೇಳೆ ಸರ ಕಳವು ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಯಡವನಹಳ್ಳಿಯ ಚರ್ಚ್ ಬಳಿಯ ಮನೆಯಲ್ಲಿ ಇಟ್ಟಿದ್ದ 140 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸರ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.