ಡಾ.ಕೆ.ಭುಜಂಗ ಶೆಟ್ಟಿ ಅವರ ‘ಮಧುಮೇಹದಿಂದ ಮುಕ್ತಿ’ ಪುಸ್ತಕವನ್ನು ನಿವೃತ್ತ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬಿಡುಗಡೆ ಮಾಡಿದರು. ನಾರಾಯಣ ನೇತ್ರಾಲಯದ ಡಾ.ಚೈತ್ರಾ ಜಯದೇವ್, ಭುಜಂಗ ಶೆಟ್ಟಿ ಅವರ ಸೊಸೆ ನಮ್ರತಾ ಶೆಟ್ಟಿ, ಮಗಳು ನಯನಾ ಶೆಟ್ಟಿ, ಪತ್ನಿ ರಾಜ್‌ಕಮಲ್ ಶೆಟ್ಟಿ ಹಾಗೂ ಮಗ ನರೇಶ್ ಶೆಟ್ಟಿ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಹಾರ ಮತ್ತು ಜೀವನ ಕ್ರಮ ಅತ್ಯಂತ ಮುಖ್ಯವಾದುದು. ಇವೆರಡರ ಮಧ್ಯೆ ಸಮತೋಲನ ಸಾಧಿಸಿದರೆ, ಹಲವು ರೋಗಗಳನ್ನು ದೂರವಿಡಬಹುದು’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ನಾರಾಯಣ ನೇತ್ರಾಲಯವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಭುಜಂಗಶೆಟ್ಟಿ ಅವರ ‘ಮಧುಮೇಹದಿಂದ ಮುಕ್ತಿ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ನಮ್ಮ ಆಹಾರದಿಂದ ಕಾರ್ಬೊಹೈಡ್ರೇಟ್‌ಗಳು ಮತ್ತು ಸಕ್ಕರೆ ಅಂಶವನ್ನು ದೂರವಿಟ್ಟರೆ ಮಧುಮೇಹ, ರಕ್ತದೊತ್ತಡ, ಅತಿಯಾದ ತೂಕ ಮೊದಲಾದ ಸಮಸ್ಯೆಗಳನ್ನು ಹೇಗೆ ದೂರವಿಡಬಹುದು ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ’ ಎಂದರು.
‘ಭುಜಂಗ ಶೆಟ್ಟಿ ಅವರು ತಮ್ಮ ಆಹಾರ ಕ್ರಮ ಮತ್ತು ಜೀವನ ಕ್ರಮದಿಂದಲೇ ಆರೋಗ್ಯವನ್ನು ಸುಧಾರಿಸಿಕೊಂಡಿದ್ದರು. ಅದನ್ನೇ ಅವರು ಇತರರಿಗೂ ಸೂಚಿಸಿದರು. ಅವರು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೊ ನೋಡಿ ಆಟೊ ಚಾಲಕರೊಬ್ಬರು 17 ಕೆ.ಜಿ. ತೂಕ ಇಳಿಸಿದ್ದರಂತೆ’ ಎಂದು ಹೇಳಿದರು.
ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಡಾ.ನರೇನ್ ಶೆಟ್ಟಿ, ‘ಸಾಮಾನ್ಯವಾಗಿ ವೈದ್ಯರು ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ ರೋಗದ ಮೂಲವನ್ನೇ ನಿವಾರಣೆ ಮಾಡುವ ಬಗ್ಗೆ ಭುಜಂಗ ಶೆಟ್ಟಿ ಅವರು ಯೋಚನೆ ಮಾಡಿದರು. ಅದನ್ನು ತಮ್ಮ ಮೇಲೆಯೇ ಪ್ರಯೋಗ ಮಾಡಿ, ಯಶಸ್ವಿಯಾದರು. ಆನಂತರ ಇತರರಿಗೆ ಸಕ್ಕರೆ ಮತ್ತು ಕಾರ್ಬೊಹೈಡ್ರೇಟ್ ಕಡಿಮೆ ಇರುವ ಆಹಾರ ಕ್ರಮವನ್ನು ಸೂಚಿಸಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.