ADVERTISEMENT

ನಗರದಲ್ಲಿ ಗುಡ್‌ ಫ್ರೈಡೇ ಆಚರಣೆ

ಚರ್ಚ್‌ಗಳಲ್ಲಿ ಕೋವಿಡ್ ನಿಯಮ ಪಾಲನೆ * ಭಕ್ತರಿಗೆ ಚರ್ಚ್‌ಗಳಿಂದ ಆನ್‌ಲೈನ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:33 IST
Last Updated 2 ಏಪ್ರಿಲ್ 2021, 19:33 IST
ಹಲಸೂರಿನ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್‌ನ ಆವರಣದಲ್ಲಿ ವೇಷಧಾರಿಗಳು ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆಯ ಸನ್ನಿವೇಶವನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ 
ಹಲಸೂರಿನ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್‌ನ ಆವರಣದಲ್ಲಿ ವೇಷಧಾರಿಗಳು ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆಯ ಸನ್ನಿವೇಶವನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ    

ಬೆಂಗಳೂರು:ಯೇಸುಕ್ರಿಸ್ತ ಶಿಲುಬೇರಿದ ‘ಗುಡ್‌ ಫ್ರೈಡೇ’ ದಿನವನ್ನು ನಗರದ ಚರ್ಚ್‌ಗಳಲ್ಲಿ ಶುಕ್ರವಾರ ಆಚರಿಸಲಾಯಿತು. ಕೋವಿಡ್‌ ಇರುವುದರಿಂದ ಚರ್ಚ್‌ಗಳಲ್ಲಿ ಎಲ್ಲ ರೀತಿಯ ಕೋವಿಡ್‌ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯವಾಗಿತ್ತು.

ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಹಾಜರಾಗುವವರಿಗೆ ಮಾಸ್ಕ್‌ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿತ್ತು. ಕೋವಿಡ್‌ನಹಿಂದಿನ ನಿಯಮದಂತೆ ಮಕ್ಕಳು ಹಾಗೂ ವೃದ್ಧರಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಲು ಅವಕಾಶ ಇರಲಿಲ್ಲ. ಇವರಿಗಾಗಿ ಕೆಲವು ಚರ್ಚ್‌ಗಳಲ್ಲಿ ಆನ್‌ಲೈನ್‌ ವ್ಯವಸ್ಥೆಯೂ ಇತ್ತು.

ಶುಕ್ರವಾರ ಬೆಳಿಗ್ಗೆ 7.30ರಿಂದಲೇ ಆಚರಣೆಗಳು ಆರಂಭಗೊಂಡವು. ಎಂ.ಜಿ.ರಸ್ತೆಯ ಈಸ್ಟ್‌ ಪರೇಡ್ ಮಲಯಾಳಂ ಚರ್ಚ್‌ನಲ್ಲಿ 150 ಮಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

‘ಕೋವಿಡ್‌ ಪರಿಸ್ಥಿತಿ ಇರುವ ಕಾರಣಕ್ಕೆ ಈ ಬಾರಿ ಆನ್‌ಲೈನ್‌ ಮೂಲಕವೇ ಗುಡ್‌ಫ್ರೈಡೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಕ್ತರಿಗೆ ತಿಳಿಸಿದ್ದೆವು’ ಎಂದು ಚರ್ಚ್‌ನ ಕಾರ್ಯದರ್ಶಿ ಫ್ರೇಮನ್ ಡಿ.ನೀನನ್ ತಿಳಿಸಿದರು.

ಚಾಮರಾಜಪೇಟೆಯ ಸೇಂಟ್‌ ಲೂಕ್ಸ್‌ ಚರ್ಚ್‌ನಲ್ಲೂ ಗುಡ್‌ಫ್ರೈಡೇ ಆಚರಣೆ ನಡೆಯಿತು. ಇಲ್ಲಿ ಭೌತಿಕವಾಗಿ ಕೆಲವೇ ಮಂದಿ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಚರ್ಚ್‌ನ ವೆಬ್‌ಸೈಟ್‌, ಯೂಟ್ಯೂಬ್, ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಮನೆಗಳಿಂದಲೇ ಆಚರಣೆಯಲ್ಲಿ ಪಾಲ್ಗೊಂಡರು.

‘ಆಚರಣೆಗೆ ಕೇವಲ 200 ಮಂದಿಗೆ ಅವಕಾಶ ನೀಡಲಾಗಿತ್ತು. ಭಾನುವಾರದ ಈಸ್ಟರ್‌ನಲ್ಲಿಮೊದಲ ಸೇವೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಇವೆಲ್ಲದರ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ’ ಎಂದು ಎಂ.ಜಿ.ರಸ್ತೆಯ ಸೇಂಟ್ ಮಾರ್ಕ್ಸ್‌ ಕ್ಯಾಥೆಡ್ರಲ್ ಚರ್ಚ್‌ನ ರೆವರೆಂಡ್ ವಿನ್ಸೆಂಟ್ ವಿನೋದ್ ಕುಮಾರ್ ಮಾಹಿತಿ ನೀಡಿದರು.

’ಆಚರಣೆ ವೇಳೆ ಪ್ರತಿಮೆಗಳನ್ನು ಮುಟ್ಟಲು ಅಥವಾ ಚುಂಬಿಸಲು ಅನುಮತಿ ನೀಡಿಲ್ಲ. ಪ್ರತಿ ವರ್ಷಯೇಸು ಶಿಲುಬೆಯನ್ನು ಹೊತ್ತ ನಡಿಗೆಯನ್ನು ಸಾಂಕೇತಿಕವಾಗಿ ಚರ್ಚ್‌ನ ಹೊರಗೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಚರ್ಚ್‌ ಒಳಭಾಗದಲ್ಲೇ ಹಮ್ಮಿಕೊಳ್ಳಲಾಗಿತ್ತು’ ಎಂದು ಪಾದ್ರಿಯೊಬ್ಬರು ತಿಳಿಸಿದರು.

ಚರ್ಚ್‌ಗಳಲ್ಲಿ ಭಕ್ತರು ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಸೂಚನೆಯಂತೆ ಭೌತಿಕವಾಗಿ ಬದಲಾಗಿ ಆನ್‌ಲೈನ್‌ ಸೇವೆಗಳಲ್ಲಿ ಹಾಜರಾದರು. ಚರ್ಚ್‌ನ ಆವರಣಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳೆಲ್ಲವೂ ಈ ಬಾರಿ ಚರ್ಚ್‌ನ ಒಳಭಾಗದಲ್ಲಿ ಸರಳವಾಗಿ ನಡೆದವು. ಚರ್ಚ್‌ಗಳಲ್ಲಿ ಭಾನುವಾರ ನಡೆಯಲಿರುವ ಈಸ್ಟರ್‌ ವೇಳೆಯೂ ಭಕ್ತರಿಗೆ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.