ADVERTISEMENT

ನಂದಿನಿ ಇಡ್ಲಿ, ದೋಸೆ ಹಿಟ್ಟಿಗೆ 'ಶುಭಾರಂಭ': ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 15:29 IST
Last Updated 31 ಡಿಸೆಂಬರ್ 2024, 15:29 IST
   

ಬೆಂಗಳೂರು: ವಾರದ ಹಿಂದೆ ಮಾರುಕಟ್ಟೆಗೆ ಪರಿಚಯಿಸಲಾದ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿ ಬ್ರ್ಯಾಂಡ್‌ನ ‘ಶೇ 5 ವೇ ಪ್ರೋಟೀನ್’ ಮಿಶ್ರಣದ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದ್ಯ ಬೆಂಗಳೂರಿನಲ್ಲಿ ಮಾತ್ರ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಪ್ರಾಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ. ನಂದಿನಿ ಹಾಲಿನ ಬೂತ್‌ಗಳಲ್ಲಿ ಹಿಟ್ಟು ಲಭ್ಯವಿದೆ. ನಿತ್ಯ ಸುಮಾರು ಒಂದು ಟನ್‌ನಷ್ಟು ಮಾರಾಟವಾಗುತ್ತಿದೆ. ಮೂರು– ನಾಲ್ಕು ದಿನಗಳಿಂದ ಸುಮಾರು ಎರಡೂವರೆ ಟನ್‌ ಹಿಟ್ಟು ಪೂರೈಕೆಯಾಗಿ, ಮಾರಾಟವಾಗಿದೆ. ಬೇಡಿಕೆ ಆಧರಿಸಿ, ನಗರದ ಎಲ್ಲ ಭಾಗಕ್ಕೂ ಹಂತ ಹಂತವಾಗಿ ವಿಸ್ತರಿಸಲು ಕೆಎಂಎಫ್ ಸಿದ್ದತೆ ನಡೆಸಿದೆ.

ಬೆಂಗಳೂರಿನ ಉತ್ತರ ಭಾಗದ ಜಯನಗರ, ಪದ್ಮನಾಭನಗರ ಹಾಗೂ ಕೇಂದ್ರ ಭಾಗದ ಮಲ್ಲೇಶ್ವರ, ಶೇಷಾದ್ರಿಪುರ ಸುತ್ತಮುತ್ತಲಿನ ನಂದಿನಿ ಹಾಲಿನ ಡೀಲರ್‌ಗಳಿಗೆ ದೋಸೆ, ಇಡ್ಲಿ ಹಿಟ್ಟನ್ನು ಪೂರೈಸಲಾಗುತ್ತಿದೆ.

ADVERTISEMENT

‘ಹಿಟ್ಟಿನ‌ ಪೊಟ್ಟಣಗಳನ್ನು ಹಾಲಿನ ವ್ಯಾನ್‌ನಲ್ಲಿ ಕಳುಹಿಸುತ್ತಿಲ್ಲ. ಇದಕ್ಕಾಗಿ ಪ್ರತ್ಯೇಕ ವಾಹನಗಳನ್ನು ನಿಯೋಜಿಸಿದ್ದೇವೆ. ಸದ್ಯ ಐದಾರು ವಾಹನಗಳಲ್ಲಿ ಡೀಲರ್‌ಗಳಿಗೆ ಹಿಟ್ಟಿನ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಬೆಂಗಳೂರಿನ ಬೇರೆ ಬೇರೆ ಭಾಗಗಳಿಗೆ ವಿಸ್ತರಣೆ ಮಾಡಿದ ಮೇಲೆ 10ರಿಂದ 12 ವಾಹನಗಳನ್ನು ನಿಯೋಜಿಸಲು ಯೋಜಿಸಿದ್ದೇವೆ’ ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹಾಲಿನ ಬೂತ್‌ಗೆ ಬರುವ ‌ಗ್ರಾಹಕರು ‘ನಂದಿನಿ ದೋಸೆ ಹಿಟ್ಟು ಇದೆಯಾ’ ಎಂದು ಕೇಳಿ, ಖರೀದಿಸುತ್ತಿದ್ದಾರೆಂದು ಡೀಲರ್‌ಗಳು ಹೇಳುತ್ತಿದ್ದಾರೆ. ಒಮ್ಮೆ ಖರೀದಿಸಿದವರು, ಪುನಃ ಕೇಳುತ್ತಿದ್ದಾರಂತೆ. ಹೊಸ ಗ್ರಾಹಕರ ಜೊತೆ, ಮತ್ತೆ ಮತ್ತೆ ಖರೀದಿಸುವ ಗ್ರಾಹಕರಿಗೂ ಹಿಟ್ಟು ಲಭ್ಯವಾಗುವಂತೆ ಮಾಡಿ ಎಂದು ಡೀಲರ್‌ಗಳಿಗೆ ಸಲಹೆ ನೀಡಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಂದಿನಿ’ ಉತ್ಪನ್ನಗಳಿಗೆ ಯಾವತ್ತೂ ಬೇಡಿಕೆ ಇದೆ. ಈಗ ಇಡ್ಲಿ- ದೋಸೆ ಹಿಟ್ಟನ್ನು ಗ್ರಾಹಕರು ಕೇಳುತ್ತಿದ್ದಾರೆ. ಆದರೆ ಉತ್ಪನ್ನಗಳ ಪ್ಯಾಕಿಂಗ್ ಬಗ್ಗೆ ಸ್ವಲ್ಪ‌ ಗಮನ‌ಹರಿಸಿ, ಸರಿಯಾದ ಸಮಯಕ್ಕೆ ಪೂರೈಕೆ ಮಾಡಿದರೆ, ಇನ್ನೂ ವೇಗವಾಗಿ ಗ್ರಾಹಕರನ್ನು ತಲುಪಬಹುದು’ ಎಂದು ಡೀಲರ್‌ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.