ಬೆಂಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಇತ್ತೀಚೆಗೆ ಆರ್.ಆರ್.ನಗರದಲ್ಲಿ ನಡೆದಿದ್ದ ‘ರೈತ ಸಂತೆಗೆ’ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿರುವ ರೈತರು, ಇದೇ 26 ಮತ್ತು 27ರಂದು ಮತ್ತೆ ರೈತ ಸಂತೆಯನ್ನು ಆಯೋಜಿಸುತ್ತಿದ್ದಾರೆ.
‘ನೇರ ಮಾರಾಟದ ಮೂಲಕ ನಮ್ಮ ಹೋರಾಟ’ – ‘ನಮ್ಮ ಬೆಳೆಗೆ ನಮ್ಮದೇ ಬೆಲೆ’ ಶೀರ್ಷಿಕೆಯಡಿ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಪರಿಕಲ್ಪನೆಯಡಿ ರೈತ ಸಂತೆ ಆಯೋಜಿಸಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿತ್ತು. ರೈತರ ಉತ್ಪನ್ನಗಳು ಖಾಲಿಯಾಗಿದ್ದವು. ಮೂರು ದಿನಗಳ ಸಂತೆಗೆ ಐದು ಸಾವಿರಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡುವ ಮೂಲಕ ಸಂತೆಯನ್ನು ಬೆಂಬಲಿಸಿದ್ದರು. ಮತ್ತೆ ಸಂತೆ ನಡೆಸುವಂತೆ ಬೇಡಿಕೆ ಇಟ್ಟಿದ್ದರು’ ಎಂದು ‘ರೈತ ಸಂತೆ’ಯ ಆಯೋಜಕರಲ್ಲೊಬ್ಬರಾದ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.
ಕಳೆದ ಬಾರಿ ರೈತ ಸಂತೆ ನಡೆದಿದ್ದ ಆರ್.ಆರ್.ನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲೇ ಈ ಬಾರಿಯ ಸಂತೆಯೂ ನಡೆಯಲಿದೆ. ಈ ಬಾರಿ ಅನೇಕ ಹೊಸ ರೈತರು, ರೈತ ಮಹಿಳೆಯರು ಸಂತೆಗೆ ಬರುತ್ತಿದ್ದಾರೆ. ವಿಜಯಪುರದಿಂದ ಒಡಲದನಿ ಮಹಿಳಾ ಗುಂಪು, ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಚಟ್ನಿಪುಡಿಗಳನ್ನು ತರುತ್ತಿದ್ದಾರೆ. ರಾಮನಗರದ ಚನ್ನಪಟ್ಟಣದ ರೈತರು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಸಂತೆಗೆ ತರುತ್ತಿದ್ದಾರೆ. ಇವುಗಳ ಜೊತೆಗೆ ಎಂದಿನಂತೆ, ಹಣ್ಣು–ತರಕಾರಿ, ಬೇಳೆ–ಕಾಳು, ಮೌಲ್ಯವರ್ಧಿತ ಉತ್ಪನ್ನಗಳಿರುತ್ತವೆ’ ಎಂದು ಚುಕ್ಕಿ ವಿರಿಸಿದರು.
‘ರೈತ ಸಂತೆ’ ಪ್ರೋತ್ಸಾಹಿಸುವವರು ಮತ್ತು ಈ ಕುರಿತು ಹೆಚ್ಚಿನ ಮಾಹಿತಿಗೆ 9036654365 ಮತ್ತು 9035454365 ಸಂಖ್ಯೆಗೆ ಸಂಪರ್ಕಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.