ADVERTISEMENT

ಆಡಳಿತ–ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 21:08 IST
Last Updated 9 ಆಗಸ್ಟ್ 2020, 21:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ದೇಶದ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಪ್ರಾದೇಶಿಕ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಬಳಕೆ ಮಾಡಬೇಕು. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಎಲ್ಲ ಹಂತಗಳಲ್ಲೂ ಕೈಬಿಡಬೇಕು’ ಎಂದು ಸಾಮಾಜಿಕ ಚಿಂತಕ ಎಂ.ಎನ್. ಮನು ಕುಮಾರ್ ರಾಜೇ ಅರಸ್ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಅವರು ವಿವಿಧ ದೇಶಗಳಲ್ಲಿ ಬಳಕೆಯಾಗುತ್ತಿರುವ ಭಾಷೆಗಳ ಬಗ್ಗೆ ಅಧ್ಯಯನ ನಡೆಸಿ, ವಿವರವಾದ ವರದಿಯನ್ನುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರಿಗೆ ಕಳುಹಿಸಿದ್ದಾರೆ. ‘ವಿಶ್ವಸಂಸ್ಥೆ ಗುರುತಿಸಿದ 195 ದೇಶಗಳಲ್ಲಿ 10 ದೇಶಗಳು ಮಾತ್ರ ಇಂಗ್ಲಿಷ್‌ ಭಾಷೆಯನ್ನು ಮಾತೃಭಾಷೆಯನ್ನಾಗಿ ಬಳಸುತ್ತಿವೆ. 35 ದೇಶಗಳಲ್ಲಿ ಮಾತ್ರ ಆಂಗ್ಲ ಭಾಷೆಯನ್ನು ಪ್ರಾಥಮಿಕ ಭಾಷೆಯನ್ನಾಗಿ ಬೋಧಿಸಲಾಗುತ್ತಿದೆ. ದೇಶದಲ್ಲಿ ಶೇ 20 ರಷ್ಟು ಮೇಲ್ವರ್ಗದ ಜನರಿಗಾಗಿ ಆಂಗ್ಲ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಶೇ 80 ರಷ್ಟು ಜನರ ಮೇಲೆ ಪರದೇಶದ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಲಾಗಿದೆ. ವಿದೇಶಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗೆ ಶಿಕ್ಷಣ ಹಾಗೂ ಆಡಳಿತದಲ್ಲಿ ಮೊದಲ ಆದ್ಯತೆ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್‌ ಪತ್ರಿಕೆಯನ್ನು ಕೈಬಿಡಬೇಕು. ಆಗ ಮಾತ್ರ ಗ್ರಾಮೀಣ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅವಕಾಶಗಳು ದೊರೆಯುತ್ತವೆ. ಅದೇ ರೀತಿ,ಪ್ರಾಥಮಿಕ ಸೇರಿದಂತೆ ಶಿಕ್ಷಣದ ಎಲ್ಲ ಹಂತದಲ್ಲಿ ಪ್ರಾದೇಶಿಕ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು‘ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.