ADVERTISEMENT

‘ಗ್ರೇಟರ್‌ ಬೆಂಗಳೂರು’ಗೆ ಸರ್ಕಾರ ಸಮ್ಮತಿ

1ರಿಂದ 10 ಪಾಲಿಕೆಯಾಗಿ ವಿಭಜಿಸಲು ಅವಕಾಶ, ಮೇಯರ್‌ ಅವಧಿ 5 ವರ್ಷ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:28 IST
Last Updated 22 ಜುಲೈ 2024, 18:28 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಬೆಂಗಳೂರು ನಗರಕ್ಕೆ ಮೂರು ಹಂತದಲ್ಲಿ ಹೊಸ ಆಡಳಿತ ವ್ಯವಸ್ಥೆ ಕಲ್ಪಿಸುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ– 2024’ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ದೊರೆತಿದೆ. ಒಂದರಿಂದ ಹತ್ತು ಪಾಲಿಕೆಗಳನ್ನು ರಚಿಸುವ ಅಧಿಕಾರವನ್ನು ಸರ್ಕಾರ ಹೊಂದಲಿದ್ದು, ಪ್ರತಿ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಅಧಿಕಾರದ ಅವಧಿ ಐದು ವರ್ಷಗಳಾಗಲಿದೆ. ವಾರ್ಡ್‌ಗಳ ಸಮಿತಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಧರಿಸುವ ಅಧಿಕಾರವನ್ನು ಕಾಯ್ದೆ ನೀಡಲಿದೆ.

ADVERTISEMENT

‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ–2024’ರಲ್ಲಿ ಕಾಯ್ದೆಯಾದರೆ, ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ರಚನೆಯಾಗುತ್ತದೆ. ಪ್ರಾಧಿಕಾರ, ಪಾಲಿಕೆ ಹಾಗೂ ವಾರ್ಡ್‌ಗಳೆಂಬ ಮೂರು ಹಂತದಲ್ಲಿ ಆಡಳಿತ ವ್ಯವಸ್ಥೆ ಇರಲಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಲಾಗುತ್ತದೆ. ಕಾಯ್ದೆ ಅನುಷ್ಠಾನಕ್ಕೆ ಬಂದ ಮೇಲೆ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯನ್ನು ಸರ್ಕಾರ ನಿಗದಿ ಮಾಡಲಿದೆ.

‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗೃಹ, ನಗರಾಭಿವೃದ್ಧಿ, ಸಾರಿಗೆ, ಇಂಧನ ಸಚಿವರು ಹಾಗೂ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಶಾಸಕರು, ಮುಖ್ಯ ಆಯುಕ್ತರು, ಪಾಲಿಕೆಗಳ ಮೇಯರ್‌ಗಳು, ಪ್ರತಿ ಪಾಲಿಕೆಯಿಂದ ನಾಮನಿರ್ದೇಶನಗೊಳ್ಳುವ ಇಬ್ಬರು ಸದಸ್ಯರು, ಬಿಡಿಎ, ಜಲಮಂಡಳಿ, ಬಿಎಂಟಿಸಿ, ಬಿಎಂಆರ್‌ಸಿಎಲ್‌, ಬೆಸ್ಕಾಂ, ನಗರ ಪೊಲೀಸ್‌ ಕಮಿಷನರ್‌, ಬಿಎಂಎಲ್‌ಟಿಎ ಸಿಇಒ, ಬಿಎಸ್‌ಡಬ್ಲ್ಯುಎಂಎಲ್‌ ಎಂಡಿ, ಗ್ರೇಟರ್ ಬೆಂಗಳೂರು ನಗರ ಯೋಜನೆಯ ಮುಖ್ಯ ನಗರ ಯೋಜಕ, ಗ್ರೇಟರ್‌ ಬೆಂಗಳೂರಿನ ಪ್ರಧಾನ ಎಂಜಿನಿಯರ್, ಅಗ್ನಿಶಾಮಕ ದಳದ ನಿರ್ದೇಶಕರು ಸದಸ್ಯರಾಗಿರುತ್ತಾರೆ.

ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಪಾಲಿಕೆಗಳಿಗೆ ಹಂಚುವ ಜವಾಬ್ದಾರಿ ಪ್ರಾಧಿಕಾರದ್ದಾಗಿದ್ದು, ಅಂತರ್‌ ಇಲಾಖೆಗಳ ಕೆಲಸಗಳು, ಯೋಜನೆಗಳ ಮೇಲುಸ್ತುವಾರಿಯನ್ನು ಹೊಂದಿರುತ್ತದೆ. ಮೇಲ್ಸೇತುವೆ, ಸುರಂಗ ರಸ್ತೆಯಂತಹ ಬೃಹತ್‌ ಯೋಜನೆಗಳನ್ನು ಕೂಡ ಪ್ರಾಧಿಕಾರವೇ ನಿರ್ವಹಿಸಲಿದೆ.

ನಗರ ಪಾಲಿಕೆಗಳ ವ್ಯಾಪ್ತಿ ಹಾಗೂ ಅವುಗಳ ವಾರ್ಡ್‌ಗಳನ್ನು ವಿಂಗಡಿಸುವ ಕಾರ್ಯ, ವಾರ್ಡ್‌ಗಳ ಸಂಖ್ಯೆ, ಅವುಗಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ನಿರ್ಧರಿಸಬಹುದು. ಗ್ರೇಟರ್‌ ಬೆಂಗಳೂರು ವ್ಯಾಪ್ತಿಯನ್ನು ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ಕಾಲಕಾಲಕ್ಕೆ ನಿರ್ಧರಿಸಬಹುದಾಗಿದೆ.

ನಗರ ಪಾಲಿಕೆಗಳಲ್ಲಿ ಮೇಯರ್‌, ಉಪ ಮೇಯರ್‌, ಜಂಟಿ ಆಯುಕ್ತರು, ಸ್ಥಾಯಿ ಸಮಿತಿ, ವಲಯ ಸಮಿತಿ, ವಾರ್ಡ್‌ ಸಮಿತಿಗಳು ಮತ್ತು ಪ್ರದೇಶ ಸಭಾಗಳು ಇರಲಿವೆ.

ಪ್ರತಿ ವಾರ್ಡ್‌ಗೆ ಒಂದು ಸಮಿತಿ ರಚನೆಯಾಗಲಿದ್ದು, ಆಯಾ ಕಾರ್ಪೊರೇಟರ್‌ ಅದಕ್ಕೆ ಅಧ್ಯಕ್ಷರಾಗಿರುತ್ತಾರೆ. ಪಾಲಿಕೆಯಿಂದ 10 ಸದಸ್ಯರನ್ನು ಈ ಸಮಿತಿಗೆ ನಾಮ ನಿರ್ದೇಶನ ಮಾಡಬೇಕು. ಇದರಲ್ಲಿ ಎಸ್‌ಸಿ, ಎಸ್‌ಟಿಯ ಇಬ್ಬರು, ಮೂವರು ಮಹಿಳೆಯರು, ನಿವಾಸಿಗಳ ಸಂಘದ ಇಬ್ಬರು ಪ್ರತಿನಿಧಿಗಳು ಇರಲಿದ್ದಾರೆ. ಈ ಸಮಿತಿಯಲ್ಲಿ ಆಯಾ ವಾರ್ಡ್‌ಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕ್ರಿಯಾಯೋಜನೆಯನ್ನು ಪಾಲಿಕೆಗೆ ಸಲ್ಲಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.