ADVERTISEMENT

ಮಂತ್ರಿ ಮಾಲ್‌ ನೆಲಸಮಕ್ಕೆ ತಡೆ: ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 21:58 IST
Last Updated 10 ಮಾರ್ಚ್ 2020, 21:58 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎನ್ನಲಾದ ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ವಸತಿ ಸಮುಚ್ಚಯದ ಭಾಗ ನೆಲಸಮಗೊಳಿಸದಂತೆ ಮಧ್ಯಂತರ ನಿರ್ದೇಶನ ನೀಡಿರುವ ಹೈಕೋರ್ಟ್‌, ವಿವಾದಿತ ಜಾಗದಲ್ಲಿ ಸರ್ವೆ ನಡೆಸಬಹುದು ಎಂದು ತಿಳಿಸಿದೆ.

ಮೆ.ಹಮರಾ ಶೆಲ್ಟರ್ರ್ಸ್‌ ಪ್ರೈವೇಟ್ ಲಿಮಿಟೆಡ್ ಮತ್ತು ಮೆ. ಅಭಿಷೇಕ ಪ್ರಾಪ್ ಬಿಲ್ಡ್ ಪ್ರೈವೇಡ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸರ್ವೆ ನಡೆಸಲು ಅವಕಾಶ ಇದೆ. ಆದರೆ, ಅದು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಪ್ರಾದೇಶಿಕ ಆಯುಕ್ತರು, ಬಿಬಿಎಂಪಿ ಆಯುಕ್ತರು, ಪೂರ್ವ ಹಾಗೂ ಪಶ್ಚಿಮ ವಲಯದ ಜಂಟಿ ನಿರ್ದೇಶಕರು, ಭೂ ಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಉಪ ಆಯುಕ್ತರು, ಗಾಂಧಿನಗರ ವಿಭಾಗದ ಕಂದಾಯ ನಿರೀಕ್ಷಕರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

‘ಸಂಪಿಗೆ ರಸ್ತೆಯಲ್ಲಿ ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುಚ್ಚಯ ಇರುವ ಜಾಗದಲ್ಲಿ 4 ಎಕರೆ 29 ಗುಂಟೆ ಜಾಗ ಬಿಬಿಎಂಪಿಗೆ ಸೇರಿದ್ದು, ಅದನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ. ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಿ’ ಎಂದು ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.