ಬೆಂಗಳೂರು: ‘ಬಹುಮುಖಿ ವ್ಯಕ್ತಿತ್ವದ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರ ಜನ್ಮ ಶತಮಾನೋತ್ಸವವನ್ನು ಸರ್ಕಾರವೇ ಆಚರಿಸಬೇಕಿತ್ತು. ಅದಾಗದಿರುವುದು ವಿಷಾದನೀಯ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಕನ್ನಡ ಗೆಳೆಯರ ಬಳಗ ಆಯೋಜಿಸಿದ್ದ ‘ಪ್ರೊ.ಎಲ್.ಎಸ್.ಶೇಷಗಿರಿರಾವ್ ಜನ್ಮ ಶತಮಾನೋತ್ಸವ ಸಮಾರೋಪ’ ಉದ್ಘಾಟಿಸಿ, ಪ್ರೊ.ಎಲ್‌ಎಸ್‌ಎಸ್ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
‘ಶೇಷಗಿರಿರಾವ್ ಅವರ ಜನ್ಮ ಶತಮಾನೋತ್ಸವವನ್ನು ಸರ್ಕಾರದಿಂದ ಆಚರಿಸಲಿ ಎಂದು ಕನ್ನಡ ಗೆಳೆಯರ ಬಳಗದವರು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗಿಲ್ಲ. ಇದು ದುರದೃಷ್ಟಕರ. ಸರ್ಕಾರ ಈಗಲಾದರೂ ಎಲ್.ಎಸ್. ಹೆಸರಿನಲ್ಲಿ ಅಧಿಕೃತ ಕಾರ್ಯಕ್ರಮವೊಂದನ್ನು ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತೇನೆ' ಎಂದು ಭರವಸೆ ನೀಡಿದರು.
‘ನನ್ನನ್ನು ಕಾವ್ಯ ಲೋಕದಲ್ಲಿ ಮುನ್ನಡೆಸಿದವರು ಶೇಷಗಿರಿರಾವ್. ಅವರೊಂದಿಗೆ ಅತಿ ಹೆಚ್ಚು ಸಮಯ ಕಳೆದಿರುವ ಕಾರಣದಿಂದಲೇ ನನಗೆ ಮಹಾಕಾವ್ಯಗಳನ್ನು ರಚಿಸಲು ಪೇರಣೆಯಾಯಿತು. ನನ್ನ ಬದುಕಿನ ಉದ್ದಕ್ಕೂ ಯಶ್ವಸಿಯಾಗಲು ಅವರೊಂದಿಗಿನ ನಿಕಟ ಸಂಪರ್ಕವೇ ಕಾರಣ’ ಎಂದರು.
‘ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಶೇಷಗಿರಿರಾವ್ ಅವರು ಮಾಧ್ಯಮ ಕಾರ್ಯದರ್ಶಿಯಾಗಿದ್ದರು. ನಾನು ಮುಖ್ಯಮಂತ್ರಿ ಯಾಗಿದ್ದಾಗ ಸರ್ಕಾರಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಆ ಸಮಯದಲ್ಲಿ ಆರಂಭಿಸಿದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಶೇಷಗಿರಿರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದೆ’ ಎಂದು ನೆನಪಿಸಿಕೊಂಡರು.
ಜನ್ಮಶತಮಾನೋತ್ಸವದ ನೆನಪಿಗಾಗಿ ಶೇಷಗಿರಿರಾವ್ ಅವರ ಕುರಿತು ಕನ್ನಡ ಗೆಳೆಯರ ಬಳಗ ಪ್ರಕಟಿಸಿರುವ ‘ಕನ್ನಡ ವಿಶೇಷ ಸಾಹಿತ್ಯ ಗಿರಿ’ ಗ್ರಂಥವನ್ನು ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಬಿಡುಗಡೆ ಮಾಡಿ ಮಾತನಾಡಿ, ಎಲ್‌ಎಸ್ ಅವರೊಂದಿಗಿನ ಒಡನಾಟ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ‘ಪ್ರೊ.ಎಲ್.ಎಸ್.ಶೇಷಗಿರಿ ಜನ್ಮಶತಮಾನೋತ್ಸವ’ ಗೌರವಾರ್ಪಣೆ ಮಾಡಲಾಯಿತು. ಕನ್ನಡ ಗಣಕ ಪರಿಷತ್ ಅಭಿವೃದ್ದಿಪಡಿಸಿರುವ ಶೇಷಗಿರಿರಾವ್ ಕುರಿತ ಜಾಲತಾಣವನ್ನು ವೀರಪ್ಪ ಮೊಯಿಲಿ ಉದ್ಘಾಟಿಸಿದರು.
ಸಾಹಿತಿ ಗೊ.ರೂ.ಚನ್ನಬಸಪ್ಪ, ವಿಮರ್ಶಕ ಮಲ್ಲೇಪುರಂ ಜಿ. ವೆಂಕಟೇಶ್, ಎಲ್.ಎಸ್.ಶೇಷಗಿರಿರಾವ್ ಅವರ ಪತ್ನಿ ಭಾರತಿ ಶೇಷಗಿರಿರಾವ್, ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಆರ್.ಶೇಷಶಾಸ್ತ್ರಿ, ಟಿ.ಎನ್.ವಾಸುದೇವಮೂರ್ತಿ, ಗೌತಮಿ, ಬಾ.ಹ ಉಪೇಂದ್ರ, ರಮೇಶ್ ಬಾಬು, ಮಾ.ಚಂದ್ರಶೇಖರ್, ಆರ್. ಶೇಷಶಾಸ್ತ್ರಿ, ರಾಮಸ್ವಾಮಿ, ರಘುವೀರ ಸಮರ್ಥ, ರವಿಕುಮಾರ್, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.