ADVERTISEMENT

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಯೋಜನೆ: ಡಿ.ಕೆ. ಶಿವಕುಮಾರ್‌

ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ಟೀಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉತ್ತರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 20:19 IST
Last Updated 22 ಆಗಸ್ಟ್ 2025, 20:19 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ವಿಧಾನಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಚರ್ಚೆಯ ನಂತರ ಅವರು ಉತ್ತರ ನೀಡಿದರು.

‘ವಿರೋಧ ಪಕ್ಷಗಳ ನಾಯಕರು ಅನೇಕ ಟೀಕೆಗಳನ್ನು ಮಾಡಿದ್ದಾರೆ. ಅದು ಅವರ ಹಕ್ಕು, ಅವರು ನಮ್ಮನ್ನು ಟೀಕೆ ಮಾಡದಿದ್ದರೆ ಅವರ ಅಸ್ತಿತ್ವವೇ ಇರುವುದಿಲ್ಲ. ನಾನು ಬಹಳ ಆಸಕ್ತಿಯಿಂದ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನಾವು ಯಾರೂ ಇಲ್ಲಿ ಶಾಶ್ವತವಲ್ಲ. ನನಗೆ ಸಿಕ್ಕ ಅವಕಾಶದಲ್ಲಿ ಬೆಂಗಳೂರಿಗೆ ಏನಾದರೂ ಕೊಡುಗೆ ಕೊಟ್ಟು ಹೋಗಬೇಕು ಎಂದುಕೊಂಡಿದ್ದೇನೆ’ ಎಂದರು.

ADVERTISEMENT

‘ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಎಂದು ಸಾರ್ವಜನಿಕರು ಕೂಡ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ‘ರಸ್ತೆ ಗುಂಡಿ ಗಮನ’ ಯೋಜನೆಯಲ್ಲಿ ರಸ್ತೆ ಗುಂಡಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪೊಲೀಸರು ಸುಮಾರು 10 ಸಾವಿರ ಗುಂಡಿಗಳನ್ನು ಗುರುತಿಸಿದ್ದು. ಇದರಲ್ಲಿ ಸುಮಾರು 5,377 ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ತಿಳಿಸಿದರು.

50× 80 ಅಡಿ ಅಳತೆವರೆಗಿನ ಕಟ್ಟಡಗಳ ನಿರ್ಮಾಣಕ್ಕೆ ಸ್ವಯಂಚಾಲಿತ ‘ನಂಬಿಕೆ ನಕ್ಷೆ’ ಯೋಜನೆಯಲ್ಲಿ ಒಂಬತ್ತು ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಬಡಾವಣೆಗಳನ್ನು ನಿರ್ಮಿಸಿದ ನಂತರ ಕಂದಾಯ ನಿವೇಶನಗಳನ್ನು ಹಂಚಿ, ಅಲ್ಲಿರುವ ರಸ್ತೆಗಳು ಮಾಲೀಕನ ಹೆಸರಿನಲ್ಲಿ ಇದ್ದ ಅನೇಕ ಪ್ರಕರಣಗಳಿದ್ದವು. ಈ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ ಮಾಡಲಾಗುತ್ತದೆ. 7.5 ಲಕ್ಷ ಬಿ ಖಾತೆಗಳನ್ನು ‘ಎ’ ಖಾತೆಗಳನ್ನಾಗಿ ಮಾಡಲಾಗುತ್ತದೆ. ‘ಅಭಿವೃದ್ದಿ ಹೊಂದಿದ ಜಮೀನು ’ ಎಂದು ಮಾರ್ಗಸೂಚಿ ದರದ ಶೇ 5.5ರಷ್ಟು ಶುಲ್ಕ ಪಾವತಿಸಿಕೊಂಡು ‘ಎ’ ಖಾತೆ ನೀಡಲು ತೀರ್ಮಾನ ಮಾಡಿದ್ದೇವೆ’ ಎಂದರು.

ಡಿ.ಕೆ. ಶಿವಕುಮಾರ್‌ ಹೇಳಿದ್ದು

* ₹1,700 ಕೋಟಿ ವೆಚ್ಚದಲ್ಲಿ 154 ಕಿಮೀ ರಸ್ತೆಗಳ ವೈಟ್ ಟಾಪಿಂಗ್

* ₹7,500 ಕೋಟಿ ವೆಚ್ಚದಲ್ಲಿ 632 ಕಿ.ಮೀ ಉಪ ಮುಖ್ಯ ರಸ್ತೆಗಳ ವೈಟ್‌ ಟಾಪಿಂಗ್‌

* ₹699 ಕೋಟಿ ವೆಚ್ಚದಲ್ಲಿ 450 ಕಿ.ಮೀ ಉದ್ದದ ರಸ್ತೆಗಳಿಗೆ ಬ್ಲಾಕ್ ಟಾಪಿಂಗ್

* ₹180 ಕೋಟಿ ವೆಚ್ಚದಲ್ಲಿ ನಗರದೆಲ್ಲೆಡೆ ಎಲ್‌ಇಡಿ ಲೈಟ್‌ ಅಳವಡಿಕೆ

* ₹3,000 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಪಕ್ಕದಲ್ಲಿ 300 ಕಿ.ಮೀ ರಸ್ತೆ

* ₹9,000 ಕೋಟಿ ವೆಚ್ಚದಲ್ಲಿ 44 ಕಿ.ಮೀ ಡಬಲ್‌ ಡೆಕರ್‌ ರಸ್ತೆ

* ₹15 ಸಾವಿರ ಕೋಟಿ ವೆಚ್ಚದಲ್ಲಿ ಎಲಿವೇಟೆಡ್‌ ಕಾರಿಡಾರ್ ನಿರ್ಮಾಣ

* ₹2,000 ಕೋಟಿ ವಿಶ್ವಬ್ಯಾಂಕ್ ನೆರವಿನಿಂದ 173 ಕಿ.ಮೀ ಮಳೆ ನೀರುಗಾಲುವೆ ನಿರ್ಮಾಣ

* 2,100 ಕಿ.ಮೀ ಸಂಪರ್ಕ ಜಾಲ ವಿಸ್ತರಣೆಯಿಂದ 50 ಲಕ್ಷ ಜನರಿಗೆ ಅನುಕೂಲ

* ₹1,700 ಕೋಟಿ ವೆಚ್ಚದಲ್ಲಿ ಕೆರೆಗಳ ‘ಇಂಟರ್‌ ಲಿಂಕಿಂಗ್’ ಕಾಮಗಾರಿ

‘ನನ್ನ ತಾಯಿಯ ಜಮೀನು ಹೋಗಿದೆ’

‘ಪಿಆರ್ ಆರ್ ಯೋಜನೆಗೆ ವಶಪಡಿಸಿಕೊಂಡಿರುವ ಜಮೀನನ್ನು ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ. ನನ್ನ ತಾಯಿಯ ಜಮೀನು ಕೂಡ ಹೋಗಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಆಗಿಲ್ಲ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಪರಿಹಾರಕ್ಕೆ 60:40 ಅನುಪಾತದಲ್ಲಿ ಒಪ್ಪಿಗೆ ಸೂಚಿಸಲಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಹೊಸಕೋಟೆ, ನೆಲಮಂಗಲ, ಹೊಸೂರು, ತಾವರೆಕೆರೆಗೆ ಮೆಟ್ರೊ

‘ಹೊಸಕೋಟೆ, ನೆಲಮಂಗಲ, ಹೊಸೂರು, ತಾವರೆಕೆರೆ ಭಾಗಕ್ಕೆ ನಮ್ಮ ಮೆಟ್ರೊ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ಸಂಪರ್ಕ ಕಲ್ಪಿಸುವ 7.5 ಕಿ.ಮೀ ಮಾರ್ಗ ಡಿಸೆಂಬರ್ 26ರ ವೇಳೆಗೆ ಸಾರ್ವಜನಿಕ ಸೇವೆಗೆ ದೊರೆಯಲಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ರಾಮನಗರ, ಮಾಗಡಿ, ಚನ್ನಪಟ್ಟಣದಲ್ಲಿ ಕಸ ವಿಲೇವಾರಿ

‘ನಗರದ ಹೊರವಲಯದಲ್ಲಿ ನಾಲ್ಕು ದಿಕ್ಕುಗಳಲ್ಲಿ ಕಸ ವಿಲೇವಾರಿ ಘಟಕ ಮಾಡಲು ಉದ್ದೇಶಿಸಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ, ರಾಮನಗರ, ಚನ್ನಪಟ್ಟಣ, ಮಾಗಡಿ ಭಾಗದಲ್ಲಿಯೂ ಕಸ ವಿಲೇವಾರಿಗೆ ಸಿದ್ಧತೆ ಮಾಡುತ್ತಿದ್ದೇವೆ. ಈಗಿನ ಹೊಸ ತಂತ್ರಜ್ಞಾನದಲ್ಲಿ ಕಸವನ್ನು 3 ದಿನದಲ್ಲಿ ಖಾಲಿ ಮಾಡಬಹುದು. ಅಲ್ಲದೇ ವಾಸನೆ ಮುಕ್ತವಾದ ಘಟಕಗಳನ್ನು ನಿರ್ಮಾಣ ಮಾಡಬಹುದಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಹೊಸಕೋಟೆ, ನೆಲಮಂಗಲ, ಹೊಸೂರು, ತಾವರೆಕೆರೆಗೆ ಮೆಟ್ರೊ

‘ಹೊಸಕೋಟೆ, ನೆಲಮಂಗಲ, ಹೊಸೂರು, ತಾವರೆಕೆರೆ ಭಾಗಕ್ಕೆ ನಮ್ಮ ಮೆಟ್ರೊ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ಸಂಪರ್ಕ ಕಲ್ಪಿಸುವ  7.5 ಕಿ.ಮೀ  ಮಾರ್ಗ ಡಿಸೆಂಬರ್ 26ರ ವೇಳೆಗೆ ಸಾರ್ವಜನಿಕ ಸೇವೆಗೆ ದೊರೆಯಲಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.