ADVERTISEMENT

ರಾಜ್ಯಪಾಲರ ಆರೋಗ್ಯ ಮಾಹಿತಿ ಸಂಗ್ರಹಿಸಿದ ಬಿಬಿಎಂಪಿ ಆಯುಕ್ತ, ವಿಶೇಷ ಆಯುಕ್ತರ ತಂಡ

ಮನೆ–ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 19:24 IST
Last Updated 16 ಮೇ 2020, 19:24 IST
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ   

ಬೆಂಗಳೂರು: ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಮತ್ತು ವಿಶೇಷ ಆಯುಕ್ತಬಸವರಾಜ್ ನೇತೃತ್ವದ ತಂಡ ಶನಿವಾರ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ‘ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ನಗರದಾದ್ಯಂತ ನಡೆಯುತ್ತಿರುವ ಮನೆ-ಮನೆ ಆರೋಗ್ಯ ಸಮೀಕ್ಷೆಯಡಿ ರಾಜ್ಯಪಾಲರ ಆರೋಗ್ಯ ಮಾಹಿತಿಯನ್ನೂ ಸಂಗ್ರಹಿಸಲಾಯಿತು’ ಎಂದು ತಿಳಿಸಿದರು.

‌‘ರಾಜ್ಯಸರ್ಕಾರದ ನಿರ್ದೇಶನದ ಮೇರೆಗೆ ನಗರದಲ್ಲಿ ಮೇ 7ರಿಂದ ಮನೆ-ಮನೆ ತೆರಳಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಅವರ ಆರೋಗ್ಯದ ಮಾಹಿತಿಯನ್ನು ‘ಹೆಲ್ತ್ ವಾಚ್’ ಮೊಬೈಲ್ ಆ್ಯಪ್ ಬಳಸಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ADVERTISEMENT

‘ನಗರದ 36 ಲಕ್ಷ ಮನೆಗಳ ಪೈಕಿ 13 ಲಕ್ಷ ವಸತಿ ಮನೆಗಳಿಗೆ ಬಿಬಿಎಂಪಿ ನಿಯೋಜಿಸಿರುವ 3 ಸಾವಿರ ತಂಡಗಳು ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿವೆ. ದೀರ್ಘಕಾಲದ ಆರೋಗ್ಯ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಸಮಸ್ಯೆ ಸೇರಿದಂತೆ ಇನ್ನಿತರ ಆರೋಗ್ಯ ತೊಂದರೆ ಎದುರಿಸುತ್ತಿರುವವರ ವಿವರಗಳನ್ನು ಕಲೆ ಹಾಕುತ್ತಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.