ADVERTISEMENT

‘ಮಾನವ ಹಕ್ಕು ಸಂಘಟನೆಗಳ ಸೊಲ್ಲಡಗಿಸಲು ದಾಳಿ: ಅಮ್ನೆಸ್ಟಿ

ಇ.ಡಿ ದಾಳಿಯನ್ನು ಕಟುವಾಗಿ ಟೀಕಿಸಿದ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 18:05 IST
Last Updated 26 ಅಕ್ಟೋಬರ್ 2018, 18:05 IST
ಅಮ್ನೆಸ್ಟಿ ಇಂಟರ್‌ನ್ಯಾಷನಲ್‌
ಅಮ್ನೆಸ್ಟಿ ಇಂಟರ್‌ನ್ಯಾಷನಲ್‌   

ಬೆಂಗಳೂರು: ‘ಮಾನವ ಹಕ್ಕುಗಳ ಪರವಾಗಿ ಹೋರಾಡುವ ಸಂಘಟನೆಗಳ ಸೊಲ್ಲಡಗಿಸುವ ಉದ್ದೇಶದಿಂದ ಅವುಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ನಡೆಸಲಾಗುತ್ತಿದೆ’ ಎಂದು ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ’ ಕಟುವಾಗಿ ಟೀಕಿಸಿದೆ.

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ ಸಂಬಂಧ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಕೇಂದ್ರ ಗೃಹ ಸಚಿವಾಲಯ 2010ರಲ್ಲಿ ಸಂಸ್ಥೆ ನೋಂದಣಿ ರದ್ದುಪಡಿಸಿದ ಬಳಿಕ ನಿಯಮಗಳ ಉಲ್ಲಂಘನೆ ಆರೋಪ ಕೇಳಿಬಂದಿತ್ತು.

‘ನಾವು ಕಾನೂನನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಿದ್ದೇವೆ. ಭಾರತದ ಕಾನೂನುಗಳಿಗೆ ಅನುಗುಣವಾಗೇನಮ್ಮ ಕಾರ್ಯಾಚರಣೆ ನಡೆಯುತ್ತಿದೆ. ಹೊಣೆಗಾರಿಕೆ ಮತ್ತು ಪಾರದರ್ಶಕತೆ ನಮ್ಮ ಮೂಲ ಸಿದ್ಧಾಂತ. ಆದರೂ, ನಮ್ಮನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ’ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯಪಾಲಕ ನಿರ್ದೇಶಕ ಆಕಾರ್‌ ಪಟೇಲ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಪ್ರೈವೇಟ್‌ ಲಿ. ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಫೌಂಡೇಷನ್ ನಡುವಿನ ಸಂಬಂಧ ಕುರಿತೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಅವರು ಕೇಳುತ್ತಿರುವ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿದ್ದು, ಈಗಾಗಲೇ ಸಂಬಂಧಪಟ್ಟ ಇಲಾಖೆಗೂ ಸಲ್ಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಅಮ್ನೆಸ್ಟಿ ಕಚೇರಿಗೆ ಬಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗೇಟುಗಳಿಗೆ ಬೀಗ ಹಾಕಿದರು. ಕಚೇರಿಯಲ್ಲೇ ಉಳಿಯುವಂತೆ ಸಿಬ್ಬಂದಿಗೆ ಸೂಚಿಸಿದರು. ಕಂಪ್ಯೂಟರ್ ಹಾಗೂ ಫೋನ್‌ಗಳನ್ನು ಸ್ವಿಚ್‌ಆಫ್‌ ಮಾಡುವಂತೆ ನಿರ್ದೇಶಿಸಿದರು. ದಾಳಿ ಮಧ್ಯರಾತ್ರಿ ಮುಗಿದಿದ್ದು, ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗಿದೆ ಎಂದೂ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.