ADVERTISEMENT

ಕನಕಾಂಬರ ಪ್ರತಿ ಕೆ.ಜಿಗೆ ₹2,500

ಗೌರಿ–ಗಣೇಶ ಹಬ್ಬದ ಅಂಗವಾಗಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 18:47 IST
Last Updated 25 ಆಗಸ್ಟ್ 2025, 18:47 IST
ಗೌರಿ ಗಣೇಶ ಹಬ್ಬದ ಅಂಗವಾಗಿ ಬಸವನಗುಡಿಯ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಸೋಮವಾರ ಮಹಿಳೆಯರು ಬಾಳೆ ಕಂದು ಖರೀದಿಸಿದರು
ಪ್ರಜಾವಾಣಿ ಚಿತ್ರಗಳು: ರಂಜು ಪಿ.
ಗೌರಿ ಗಣೇಶ ಹಬ್ಬದ ಅಂಗವಾಗಿ ಬಸವನಗುಡಿಯ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಸೋಮವಾರ ಮಹಿಳೆಯರು ಬಾಳೆ ಕಂದು ಖರೀದಿಸಿದರು ಪ್ರಜಾವಾಣಿ ಚಿತ್ರಗಳು: ರಂಜು ಪಿ.   

ಬೆಂಗಳೂರು: ಗೌರಿ–ಗಣೇಶ ಹಬ್ಬವನ್ನು ಸಂಭ್ರಮ– ಸಡಗರದಿಂದ ಆಚರಿಸಲು ನಗರದ ಜನರು ಸಜ್ಜಾಗಿದ್ದಾರೆ. 

ಹಬ್ಬಕ್ಕೆ ಬೇಕಾಗಿರುವ ಗೌರಿ– ಗಣೇಶನ ಮೂರ್ತಿ, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಸಂಭ್ರಮ ಸೋಮವಾರ ಜೋರಾಗಿತ್ತು.

ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನಕ್ಕೇರಿದ್ದ ಹೂವು –ಹಣ್ಣು ಬೆಲೆ ಈಗ ಸ್ವಲ್ಪ ಇಳಿದಿದೆ. ವರ ಮಹಾಲಕ್ಷ್ಮಿ ಹಬ್ಬದಲ್ಲಿ ಹೂವಿನ ದರ ಹೆಚ್ಚಿತ್ತು, ಈಗ ತುಸು ಇಳಿದಿದೆ.

ADVERTISEMENT

ಕೆ.ಆರ್‌.ಮಾರುಕಟ್ಟೆಯಲ್ಲಿ ಸೋಮವಾರ ಮುಂಜಾನೆಯೇ ಗ್ರಾಹಕರು ಜಮಾಯಿಸಿದ್ದರು. ಚಿಕ್ಕಪೇಟೆಯ ಅವೆನ್ಯೂ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಸಂಚಾರ ದಟ್ಟಣೆ ನಿವಾರಣೆಗೆ ಪೊಲೀಸರು ಹರಸಾಹಸ ಪಟ್ಟರು. 

ಕನಕಾಂಬರ ಈಗಲೂ ದುಬಾರಿ: ವರಮಹಾಲಕ್ಷ್ಮಿ ಹಬ್ಬದ ಅವಧಿಯಲ್ಲಿನ ದರಕ್ಕೆ ಹೋಲಿಸಿದರೆ ಗೌರಿ–ಗಣೇಶನ ಹಬ್ಬಕ್ಕೆ ಹೂವಿನ ದರ ಕಡಿಮೆಯಾಗಿದೆ. ಆದರೆ, ಕನಕಾಂಬರ ಮಾತ್ರ ಕೆ.ಜಿ.ಗೆ ₹2,500ರಂತೆ ಮಾರಾಟವಾಗುತ್ತಿದೆ. 

‘ವರಮಹಾಲಕ್ಷ್ಮಿ ಹಬ್ಬದ ವೇಳೆ ಪ್ರತಿ ಕೆ.ಜಿ. ಕನಕಾಂಬರ ಹೂವಿನ ದರ ₹3,000ಕ್ಕೆ ತಲುಪಿತ್ತು. ನಂತರ ಪ್ರತಿ ಕೆ.ಜಿ.ಗೆ ₹ 600ಕ್ಕೆ ಕುಸಿದಿತ್ತು. ಗೌರಿ–ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮತ್ತೆ ಭಾರಿ ಜಿಗಿತ ಕಂಡಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳಾದ ಸಾಹಿಲ್‌ ಹಾಗೂ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಲ್ಲಿಗೆ ಹೂವು ಕೆ.ಜಿಗೆ ₹1,000ರಂತೆ ಮಾರಾಟ ಆಗುತ್ತಿದೆ. ಹೂವಿನ ದರಗಳಲ್ಲಿ ಬುಧವಾರ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಜತೆಗೆ ಬಾಳೆಕಂದು, ಹೂವಿನಹಾರ, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಹೆಚ್ಚಾಗಿತ್ತು. ಎಕ್ಕದ ಹಾರಕ್ಕೆ ₹50, ಗರಿಕೆ ಕಟ್ಟು ಒಂದಕ್ಕೆ ₹30 ಇತ್ತು. ಪ್ರದೇಶವಾರು ದರಗಳಲ್ಲಿ ವ್ಯತ್ಯಾಸವಿದೆ.

ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು, ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವ ಅಂಗಡಿಗಳು ತಲೆಎತ್ತಿವೆ.

ಮಾರುಕಟ್ಟೆಗೆ ಬಗೆ–ಬಗೆಯ ಗೌರಿ-ಗಣೇಶ ಮೂರ್ತಿಗಳು ಬಂದಿವೆ. ಸೋಮವಾರದಿಂದಲೇ ಗೌರಿ, ಗಣೇಶ ಮೂರ್ತಿಗಳ ಮಾರಾಟ ಜೋರಾಗಿತ್ತು. ಮತ್ತೊಂದೆಡೆ ಗೌರಿ ಹಬ್ಬ ಆಚರಿಸುವವರು ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು.

ಗೌರಿ ಗಣೇಶ ಹಬ್ಬದ ಅಂಗವಾಗಿ ಬಸವನಗುಡಿಯ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಸೋಮವಾರ ಸಾರ್ವಜನಿಕರು ಹೂವು ಖರೀದಿಸಿದರು
ಗೌರಿ ಗಣೇಶ ಹಬ್ಬದ ಅಂಗವಾಗಿ ಬಸವನಗುಡಿಯ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಮಹಿಳೆಯರು ಗಣೇಶನ ವಿಗ್ರಹಗಳನ್ನು ವೀಕ್ಷಿಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.