ಕೆಂಗೇರಿ: ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಡಿ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದು ಅಭಿವೃದ್ಧಿ ಪರ ಬೆಳವಣಿಗೆಯಾಗಿದೆ ಎಂದು ಹ್ಯುಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್ ನ ಆರ್ ಆ್ಯಂಡ್ ಡಿ ನಿರ್ದೇಶಕ ಧರ್ಮೇಂದ್ರ ಅಭಿಪ್ರಾಯಪಟ್ಟರು.
ಮಲ್ಲತ್ತಹಳ್ಳಿಯಲ್ಲಿನ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮೊದಲನೇ ವರ್ಷದ ಬಿ.ಇ ತರಗತಿಗಳ ಉದ್ಘಾಟನಾ ಸಮಾರಂಭ ಹಾಗೂ 12ನೇ ವರ್ಷದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಪ್ರಯತ್ನದಲ್ಲೇ ಫಲಿತಾಂಶ ಸಿಕ್ಕರೆ ಅನ್ವೇಷಣಾ ಸಾಮರ್ಥ್ಯ ಕುಂಠಿತಗೊಳ್ಳುವ ಅಪಾಯವಿದೆ. ತಪ್ಪುಗಳನ್ನು ಮಾಡುವುದರಿಂದಲೇ ಕಲಿಯಲು ಸಾಧ್ಯ. ಕುತೂಹಲ ಹೆಚ್ಚಿದ್ದಷ್ಟು ಮತ್ತಷ್ಟು ಕಲಿಕೆ ಸಾಧ್ಯವಾಗಲಿದೆ ಎಂದು ಹೇಳಿದರು.
ಪಿವಿಪಿ ಟ್ರಸ್ಟ್ ಕಾರ್ಯದರ್ಶಿ ಡಾ.ಎಂ.ಮಹದೇವ ಮಾತನಾಡಿ, ‘ಉನ್ನತ ಶಿಕ್ಷಣ ಸಂಸ್ಥೆಗಳು ಉದ್ಯಮಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕಿದೆ. ಮಕ್ಕಳ ಭವಿಷ್ಯಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸುವ ಪೋಷಕರು, ಅವರ ನಿತ್ಯದ ಚಟುವಟಿಕೆಗಳ ಮೇಲೂ ನಿಗಾ ವಹಿಸಬೇಕು . ಮಕ್ಕಳು ಸಹ ಪೋಷಕರ ನಿರೀಕ್ಷೆಗಳನ್ನು ಪೂರೈಸಬೇಕು. ಅವರ ವೃದ್ಧಾಪ್ಯದಲ್ಲಿ ಆಸರೆಯಾಗಬೇಕು ಎಂದು ಕಿವಿ ಮಾತು ಹೇಳಿದರು.
ಐ ಬಿ ಎಂ ಸೇಲ್ಸ್ ಫೋರ್ಸ್ ಪ್ರಾಕ್ಟೀಸ್ ಲೀಡರ್ ಪಾಲುದಾರರಾದ ವಿಜಯಾ ರಾಮನ್ ಮಾತನಾಡಿ, ‘ ಕಲಿಕಾ ಪ್ರವೃತ್ತಿಯನ್ನು ಜೀವನ ಪರ್ಯಂತ ಕಾಪಿಟ್ಟುಕೊಳ್ಳಬೇಕು’ ಎಂದರು.
ಇದೇ ವೇಳೆ ಎಂಜಿನಿಯರಿಂಗ್‌ನ ವಿವಿಧ ವಿಭಾಗದ ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಗಳ ಒಟ್ಟು 1062 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪಿವಿಪಿ ಟ್ರಸ್ಟ್ ಅಧ್ಯಕ್ಷ ಎಸ್.ಮರಿಸ್ವಾಮಿ, ಟ್ರಸ್ಟಿ ಎಸ್.ಶಿವಮಲ್ಲು, ಡಾ.ಎಂ.ಎನ್.ತಿಪ್ಪೇಸ್ವಾಮಿ, ಡಾ.ಕೆ.ಎನ್.ಅನುರಾಧ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.