ADVERTISEMENT

‘ಅನರ್ಹ’ರ ಕ್ಷೇತ್ರಗಳಿಗೆ ₹296 ಕೋಟಿ!

110 ಹಳ್ಳಿಗಳಿಗೆ ಅನುದಾನ: ರಸ್ತೆಗಳ ಅಭಿವೃದ್ಧಿಗೆ ₹364 ಕೋಟಿ ಹಂಚಿಕೆ l ಕೆ.ಆರ್‌.ಪುರಕ್ಕೆ ₹206 ಕೋಟಿ ಮೀಸಲು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 20:09 IST
Last Updated 20 ಸೆಪ್ಟೆಂಬರ್ 2019, 20:09 IST
   

ಬೆಂಗಳೂರು: ‘ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ’ಯಲ್ಲಿ 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೆ ₹364.09 ಕೋಟಿ ಹಂಚಿಕೆ ಮಾಡಲಾಗಿದೆ. ಈ ಅನುದಾನದಲ್ಲಿ ಅನರ್ಹ ಶಾಸಕ ಬೈರತಿ ಬಸವರಾಜ್‌ ಪ್ರತಿನಿಧಿಸುತ್ತಿದ್ದ ಕೆ.ಆರ್‌.ಪುರ ಕ್ಷೇತ್ರದ ಎರಡು ವಾರ್ಡ್‌ಗಳಿಗೆ ₹206 ಕೋಟಿ ಹಂಚಲಾಗಿದೆ!

ಮೈತ್ರಿ ಸರ್ಕಾರವು ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ಯಲ್ಲಿ ಕೆ.ಆರ್‌.ಪುರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ₹90 ಕೋಟಿ ಅನುದಾನ ನೀಡಿತ್ತು. ಯೋಜನೆಯನ್ನು ರದ್ದುಪಡಿಸಿರುವ ಬಿಜೆಪಿ ಸರ್ಕಾರ, ಸರ್ಕಾರ ಸ್ಥಾಪನೆಗೆ ‘ಕೈ’ಜೋಡಿಸಿದ ಬೈರತಿ ಅವರ ಕ್ಷೇತ್ರಕ್ಕೆ ಭರಪೂರ ಅನುದಾನ ನೀಡಿದೆ. ಈ ಪೈಕಿ, ಕಾಂಗ್ರೆಸ್‌ ಸದಸ್ಯೆ ರಾಧಮ್ಮ ವೆಂಕಟೇಶ್‌ ಪ್ರತಿನಿಧಿಸುವ ಹೊರಮಾವು ವಾರ್ಡ್‌ಗೆ ₹150 ಕೋಟಿ ಹಾಗೂ ಬಿಜೆಪಿ ಸದಸ್ಯೆ ಪದ್ಮಾವತಿ ಎಂ. ಪ್ರತಿನಿಧಿಸುವ ರಾಮಮೂರ್ತಿನಗರ ವಾರ್ಡ್‌ಗೆ ₹56 ಕೋಟಿ ನಿಗದಿಪಡಿಸಲಾಗಿದೆ. ರಾಧಮ್ಮ ವೆಂಕಟೇಶ್‌ ಅವರು ಬೈರತಿ ಬಸವರಾಜ್‌ ಅವರ ಕಟ್ಟಾ ಬೆಂಬಲಿಗರು. ಹೊರಮಾವು ವಾರ್ಡ್‌ ವ್ಯಾಪ್ತಿಯಲ್ಲಿ ನಾಲ್ಕು ಹಳ್ಳಿಗಳು ಬರುತ್ತವೆ.

ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಬ್ಯಾಟರಾಯನಪುರ, ಯಲಹಂಕ, ಸರ್ವಜ್ಞನಗರ, ಕೆ.ಆರ್‌.‍‍‍ಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿ 110 ಹಳ್ಳಿಗಳು ಬರುತ್ತವೆ. ಆದರೆ, ನವ ನಗರೋತ್ಥಾನ ಯೋಜನೆಯಲ್ಲಿ ಯಲಹಂಕ, ಕೆ.ಆರ್‌.ಪುರ, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಮಹದೇವಪುರ ಹಾಗೂ ಯಶವಂತ‍ಪುರ ಕ್ಷೇತ್ರಗಳಿಗೆ ಅನುದಾನ ಹಂಚಲಾಗಿದೆ. ಈ ಅನುದಾನಗಳು ಮೂವರು ಅನರ್ಹ ಶಾಸಕರು ಹಾಗೂ ಮೂವರು ಬಿಜೆಪಿ ಶಾಸಕರ ಕ್ಷೇತ್ರಗಳ ಪಾಲಾಗಿವೆ. ಅನರ್ಹ ಕ್ಷೇತ್ರಗಳಿಗೇ ₹296 ಕೋಟಿ ಕೊಡಲಾಗಿದೆ.

ADVERTISEMENT

ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆಯಲ್ಲಿ ದಾಸರಹಳ್ಳಿ (ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌) ಹಾಗೂ ಸರ್ವಜ್ಞನಗರಕ್ಕೆ (ಕಾಂಗ್ರೆಸ್‌ ಶಾಸಕ ಕೆ.ಜೆ.ಜಾರ್ಜ್‌) ಅವರ ಕ್ಷೇತ್ರಗಳಿಗೆ ತಲಾ ₹20 ಕೋಟಿ ಕೊಡಲಾಗಿತ್ತು. ಈಗ ಈ ಅನುದಾನಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ‘ಅನರ್ಹ ಶಾಸಕರನ್ನು ಸಮಾಧಾನಪಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಜತೆಗೆ, ಜೆಡಿಎಸ್‌–ಕಾಂಗ್ರೆಸ್‌ ಶಾಸಕರ ಅನುದಾನ ಕಿತ್ತುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡರ ಆರೋಪ.

‘ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಚಿಕ್ಕಾಸೂ ಕೊಟ್ಟಿರಲಿಲ್ಲ. ₹275 ಕೋಟಿ ಅನುದಾನವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಹಂಚಲಾಗಿತ್ತು. ಆಗ ತಾರತಮ್ಯ ಎಸಗಿರಲಿಲ್ಲವೇ’ ಎಂಬುದು ಬಿಜೆಪಿ ಶಾಸಕರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.