BBMP
ಬೆಂಗಳೂರು: ಸಂವಿಧಾನದಲ್ಲಿ ಅವಕಾಶ ಇಲ್ಲದೇ ಇದ್ದರೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವ ಮೂಲಕ ಸ್ಥಳೀಯಾಡಳಿತದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ನಗರವನ್ನು ಆಡಳಿತದ ಅನುಕೂಲಕ್ಕಾಗಿ ಹೆಚ್ಚು ನಗರಾಡಳಿತವನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಬಿಬಿಎಂಪಿ ಆಗುವ ಮೊದಲು ಬೆಂಗಳೂರು ಕೂಡ ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿತ್ತು. 2007ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು 110 ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ಮಾಡಲಾಗಿತ್ತು’ ಎಂದರು.
ಈಗ ಮತ್ತೆ ಬೆಂಗಳೂರು ನಗರವನ್ನು ಛಿದ್ರ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಬೇರೆ ಬೇರೆ ಪಾಲಿಕೆ ಮಾಡಿ ಅಧಿಕಾರ ಹಿಡಿಯುವ ಹುನ್ನಾರ ಮಾಡಿದೆ. ಜೊತೆಗೆ ಇವುಗಳನ್ನು ನಿಯಂತ್ರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡುವ ಪ್ರಸ್ತಾಪ ಸದನದಲ್ಲಿ ಮಂಡಿಸಿರುವ ಮಸೂದೆಯಲ್ಲಿದೆ. ಈ ರೀತಿ ಪ್ರಾಧಿಕಾರ ರಚಿಸಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದರು.
ಬೆಂಗಳೂರು ನಗರವನ್ನು ತುಂಡು ತುಂಡು ಮಾಡಿದರೆ ಕೆಲವು ಪ್ರದೇಶಗಳಿಗೆ ಹೆಚ್ಚು ಅನುದಾನ ಸಿಕ್ಕಿ, ಇನ್ನು ಕೆಲವು ಪ್ರದೇಶಗಳಿಗೆ ಅನುದಾನ ಸಿಗದೇ ಅಭಿವೃದ್ಧಿ ಕುಂಠಿತವಾಗಬಹುದು. ತೆರಿಗೆ ಸಂಗ್ರಹದಲ್ಲಿಯೂ ವ್ಯತ್ಯಾಸಗಳಾಗಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಬೆಂಗಳೂರು ಬಿಜೆಪಿಯ ಭದ್ರಕೋಟೆ. ಇದನ್ನು ಒಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡುತ್ತಿದ್ದಾರೆ. ಪ್ರಾಧಿಕಾರ ರಚನೆಯಾದರೆ ಮುಖ್ಯಮಂತ್ರಿ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಅಭಿವೃದ್ಧಿ ಸಚಿವ ಉಪಾಧ್ಯಕ್ಷರಾಗಿರುತ್ತಾರೆ. ಗೃಹ ಸಚಿವ, ಸಾರಿಗೆ ಸಚಿವ, ನಗರಾಭಿವೃದ್ಧಿ ಸಚಿವ, ಇಂಧನ ಸಚಿವ, ನಗರ ವ್ಯಾಪ್ತಿಯ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಇರುತ್ತಾರೆ. ಆದರೆ, ಇಲ್ಲಿನ ಶಾಸಕರಿಗೆ ಪ್ರಾತಿನಿಧ್ಯ ನೀಡುವ ಪ್ರಸ್ತಾವ ಮಸೂದೆಯಲ್ಲಿ ಇಲ್ಲ ಎಂದು ದೂರಿದರು.
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಲಾಗುತ್ತಿದೆ. ಇದರಿಂದ ಅನ್ಯ ಭಾಷಿಕರ ಬಾವುಟ ಹಾರುವ ಅಪಾಯವಿದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.