ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡಗಳ ಸೆಟ್‌ಬ್ಯಾಕ್ ಉಲ್ಲಂಘನೆ ವಿನಾಯಿತಿಯನ್ನು ಶೇ 5ರಿಂದ ಶೇ 15ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕರಡು ಅಧಿಸೂಚನೆ ಶೀಘ್ರವೇ ಪ್ರಕಟವಾಗಲಿದೆ.
ಜಿಬಿಎ ವ್ಯಾಪ್ತಿಯಲ್ಲಿ ವಸತಿ ಕಟ್ಟಡಗಳ ಸೆಟ್‌ಬ್ಯಾಕ್‌ನಲ್ಲಿ ಭಾರಿ ಕಡಿತ ಮಾಡಿ 2026ರ ಜನವರಿ 5ರಂದು ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದೀಗ, ಸೆಟ್‌ಬ್ಯಾಕ್ ಉಲ್ಲಂಘನೆಯನ್ನೂ ಎರಡು ಪಟ್ಟು ಹೆಚ್ಚಿಸಲು ನಿರ್ಧರಿಸಿರುವ ಜಿಬಿಎ, ಈ ಪ‍್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿದೆ.
‘ನಕ್ಷೆ ಮಂಜೂರು, ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಸಿಗದೆ ಚಿಕ್ಕ ನಿವೇಶನಗಳಲ್ಲಿನ ಕಟ್ಟಡದ ಮಾಲೀಕರು ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗದೆ ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಸೆಟ್‌ಬ್ಯಾಕ್ ಕಡಿಮೆ ಮಾಡಲಾಗಿದ್ದು, ಅದರ ಉಲ್ಲಂಘನೆ ಪ್ರಮಾಣವನ್ನೂ ಹೆಚ್ಚಿಸುವುದರಿಂದ ಅವರೆಗೆಲ್ಲ ಅನುಕೂಲವಾಗಲಿದೆ’ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದರು.
ಈಗಿರುವ ವಲಯ ನಿಯಮಾವಳಿಗಳಂತೆ, ಅನುಮೋದನೆಯಾದ ಕಟ್ಟಡ ನಕ್ಷೆಗೆ ವಿರುದ್ಧವಾಗಿ ಶೇ 5ರಷ್ಟು ಉಲ್ಲಂಘನೆಯಾಗಿದ್ದರೆ ಅದನ್ನು ಸಕ್ರಮಗೊಳಿಸಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ, ಎಡ–ಬಲ, ಅಕ್ಕ–ಪಕ್ಕ ನಿಗದಿಯಾಗಿರುವ ಸೆಟ್‌ಬ್ಯಾಕ್ ಅನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡಿ, ಶೇ 5ರೊಳಗಿನ ಉಲ್ಲಂಘನೆ ಮಾತ್ರ ಸಕ್ರಮವಾಗಲಿದೆ. ಆದರೆ, ಹೊಸ ಪ್ರಸ್ತಾವದಲ್ಲಿ, ಉಲ್ಲಂಘನೆ ಪ್ರಮಾಣವನ್ನು ಶೇ 15ಕ್ಕೆ ವಿಸ್ತರಿಸಲಾಗಿದೆ. ಈ ಹೊಸ ನಿಯಮಾವಳಿ ಪ್ರಕಾರ, ಸೆಟ್‌ಬ್ಯಾಕ್‌ನ ಎಡ–ಬಲ, ಅಕ್ಕ–ಪಕ್ಕದ ಉಲ್ಲಂಘನೆಯನ್ನು ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ. ಕಟ್ಟಡದ ಸುತ್ತಲಿನ ಸೆಟ್‌ಬ್ಯಾಕ್ ಉಲ್ಲಂಘನೆ ಪ್ರಮಾಣವನ್ನು ಲೆಕ್ಕಾಚಾರ ಮಾಡಿ, ಅದು ಶೇ 15ಕ್ಕಿಂತ ಕಡಿಮೆ ಇದ್ದರೆ ಅಂತಹ ಕಟ್ಟಡವನ್ನು ಸಕ್ರಮಗೊಳಿಸಲಾಗುತ್ತದೆ.
ಕಟ್ಟಡದ ಎತ್ತರದ ಉಲ್ಲಂಘನೆ ಪ್ರಮಾಣವನ್ನು ಶೇ 5ರಿಂದ ಶೇ 7.5ಕ್ಕೆ ಏರಿಸಲಾಗುತ್ತದೆ. ಅಲ್ಲದೆ, ಎಫ್‌ಎಎಆರ್ (ಫ್ಲೋರ್ ಏರಿಯಾ ರೇಷಿಯೊ) ಉಲ್ಲಂಘನೆ ಪ್ರಮಾಣವನ್ನೂ ಶೇ 5ರಿಂದ ಶೇ 15ಕ್ಕೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ. ಈ ಎಲ್ಲ ಉಲ್ಲಂಘನೆ ಪ್ರಮಾಣ 5 ಸಾವಿರ ಚದರಡಿ ಒಳಗಿನ ನಿವೇಶನಗಳಿಗೆ ಮಾತ್ರ ಅನ್ವಯವಾಗಲಿದೆ.
ಎಲ್ಲ ಕಟ್ಟಡಗಳಿಗೂ ಅನ್ವಯ
ಎರಡು ಪಟ್ಟು ಹೆಚ್ಚಿಸಲು ಉದ್ದೇಶಿಸಿರುವ ಸೆಟ್‌ಬ್ಯಾಕ್ ಉಲ್ಲಂಘನೆ ಪ್ರಮಾಣ ಜಿಬಿಎ ವ್ಯಾಪ್ತಿಯಲ್ಲಿರುವ ಎಲ್ಲ ಕಟ್ಟಡಗಳಿಗೂ ಅನ್ವಯವಾಗಲಿದೆ. ಈಗಾಗಲೇ ನಿರ್ಮಾಣಗೊಂಡಿರುವ, ನಿರ್ಮಾಣ ಹಂತದಲ್ಲಿರುವ ಹಾಗೂ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಎಲ್ಲ ಕಟ್ಟಡಗಳಿಗೂ ಶೇ 15ರಷ್ಟು ಸೆಟ್‌ಬ್ಯಾಕ್ ಉಲ್ಲಂಘನೆ ವಿನಾಯಿತಿ ಅಳವಡಿಕೆಯಾಗಲಿದೆ.
ಸೆಟ್‌ಬ್ಯಾಕ್ ಅನ್ನು ಈಗಾಗಲೇ ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿ, ಅದು ಜಾರಿಯಲ್ಲಿದೆ. ಈಸೆಟ್‌ಬ್ಯಾಕ್‌ನಲ್ಲೇ ಶೇ 15ರಷ್ಟು ಪ್ರಮಾಣ ಉಲ್ಲಂಘನೆಯಾಗಿದ್ದರೂ ಕಟ್ಟಡ ಸಕ್ರಮಗೊಳ್ಳಲಿದೆ. ಸ್ವಾಧೀನಾನುಭವ ಪ್ರಮಾಣ ಪತ್ರ ಲಭ್ಯವಾಗಲಿದೆ. ಇದರಿಂದ ಸಣ್ಣ ನಿವೇಶನಗಳಲ್ಲಿರುವ ಕಟ್ಟಡಗಳಿಗೆ ಭಾರಿ ಅನುಕೂಲವಾಗಲಿದೆ ಎಂಬುದು ಜಿಬಿಎ ಅಧಿಕಾರಿಗಳ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.