ಬೆಂಗಳೂರು: ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಆಯಾ ನಗರ ಪಾಲಿಕೆಗಳಂತೆಯೇ ಕಾರ್ಯನಿರ್ವಹಿಸಲು ಲಾಗಿನ್ ಸೃಷ್ಟಿಯಾಗಬೇಕಿದೆ. ಹೀಗಾಗಿ, ಇನ್ನೆರಡು ದಿನ ಗೊಂದಲ ಹಾಗೂ ಸರ್ವರ್ ಸಮಸ್ಯೆಗಳು ಅಧಿಕಾರಿಗಳನ್ನು ಮಾತ್ರವಲ್ಲದೆ, ನಾಗರಿಕರನ್ನೂ ಕಾಡಲಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆಯೇ ಕಾರ್ಯನಿರ್ವಹಿಸಬೇಕಿರುವುದರಿಂದ ಈಗಿರುವ ಬಿಬಿಎಂಪಿ ಇ–ಆಫೀಸ್ ಲಾಗಿನ್‌ನಲ್ಲಿ ಯಾವುದೇ ಕಡತ ಅಥವಾ ಪತ್ರಗಳನ್ನು ಮಂಗಳವಾರದಿಂದ ವಿಲೇವಾರಿ ಮಾಡುವಂತಿಲ್ಲ. ಐದು ನಗರ ಪಾಲಿಕೆಗಳಿಗೆ ಆಯಾ ಇ–ಆಫೀಸ್ ಲಾಗಿನ್‌ಗಳನ್ನು ಸಿಬ್ಬಂದಿಗೆ ನೀಡುವ ಕೆಲಸ ಆರಂಭವಾಗಿದ್ದು, ಅದು ಪೂರ್ಣಗೊಳ್ಳಲು ಇನ್ನೆರಡು ದಿನ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೂ ಇದೇ ಪ್ರಕ್ರಿಯೆ ನಡೆಯಬೇಕಿದ್ದು, ಜಿಬಿಎ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಮಯಬೇಕಾಗುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿರ್ದೇಶನದಂತೆ ಸಮಿತಿ ರಚಿಸಿ, ಕಾಮಗಾರಿಗಳ ಹಸ್ತಾಂತರದಲ್ಲಿ ಮೊದಲ ಹಂತದಲ್ಲಿ, ಕೇಂದ್ರೀಕೃತ ವಿಭಾಗಗಳು ಬಜೆಟ್ ಹಾಗೂ ಪ್ಯಾಕೇಜ್‌ವಾರು ಪ್ರಗತಿಯಲ್ಲಿರುವ ಕಾಮಗಾರಿಗಳು, ಕ್ರಿಯಾಯೋಜನೆ ಅನುಮೋದನೆಗೊಂಡು ಚಾಲ್ತಿಯಲ್ಲಿರುವ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿ, ಅವುಗಳನ್ನು ಜಿಬಿಎ ಅಥವಾ ಬಿ–ಸ್ಮೈಲ್‌ಗೆ ವರ್ಗಾಯಿಸಲಾಗುತ್ತದೆ.
ಎರಡನೇ ಹಂತದಲ್ಲಿ, ಬಿಬಿಎಂಪಿ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅನುದಾನದ ಕಾಮಗಾರಿಗಳ ಪಟ್ಟಿ ಮಾಡಿ, ನಗರ ಪಾಲಿಕೆಗಳ ವ್ಯಾಪ್ತಿಗೆ ಬರುವುದನ್ನು ಅಲ್ಲಿಗೆ ಹಸ್ತಾಂತರಿಸಲಾಗುತ್ತದೆ. ರಸ್ತೆ ಮೂಲಸೌಕರ್ಯ, ಬೃಹತ್ ನೀರುಗಾಲುವೆ, ಕೆರೆ, ಅರಣ್ಯ, ತೋಟಗಾರಿಕೆ, ಆರೋಗ್ಯ–ನೈರ್ಮಲ್ಯ, ವಲಯ ಮಟ್ಟದ ಕಾಮಗಾರಿಗಳನ್ನು ಪಟ್ಟಿ ಮಾಡಿ ನಗರ ಪಾಲಿಕೆಗಳಿಗೆ ಹಸ್ತಾಂತರಿಸಲಾಗುತ್ತದೆ.
ಕಡತ ಮತ್ತು ನೋಂದಣಿ ಪುಸ್ತಗಳನ್ನು ಆಯಾ ನಗರ ಪಾಲಿಕೆಗಳಿಗೆ ಹಸ್ತಾಂತರಿಸಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕಾಗಿದೆ. ಈ ಪ್ರಕ್ರಿಯೆಗಳು ಬುಧವಾರದಿಂದ ಆರಂಭವಾಗಲಿದ್ದು, ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಮಂಗಳವಾರದಿಂದಲೇ ನಗರ ಪಾಲಿಕೆಗಳು ಕಾರ್ಯಾಚರಣೆ ಮಾಡಬೇಕೆಂಬ ಸೂಚನೆ ಇದ್ದರೂ, ಯಾವ ಸಿಬ್ಬಂದಿ ಎಲ್ಲಿ ಕೆಲಸ ಮಾಡಬೇಕು ಎಂಬುದಕ್ಕೆ ಆದೇಶಗಳಾಗಬೇಕಿವೆ. ಐಎಎಸ್, ಐಪಿಎಸ್, ಕೆಎಎಸ್, ಎಂಜಿನಿಯರಿಂಗ್ ವಿಭಾಗವರಿಗೆ ಆದೇಶವಾಗಿವೆ. ಆದರೆ, ಎಲ್ಲ ವಿಭಾಗಗಳ ಸಿಬ್ಬಂದಿಗೆ ನಿಯೋಜನೆ / ವರ್ಗಾವಣೆ ಆದೇಶ ಕೈಸೇರಿಲ್ಲ. ಆದೇಶ ಕೈಸೇರಿದರೂ ಅವರು ಜಿಬಿಎ ಆಡಳಿತ ವಿಭಾಗದಲ್ಲಿ ಹಾಜರಾಗಿ, ಹಾಜರಾತಿಯನ್ನು ಖಾತರಿಪಡಿಸಿಕೊಳ್ಳಬೇಕಿದೆ. ಹೀಗಾಗಿ, ಒಂದಷ್ಟು ದಿನ ಗೊಂದಲ ಮುಂದುವರಿಯಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.