
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆಯಲ್ಲಿ ಅನುಮೋದನೆಯಾಗಿದ್ದ ಐದು ನಗರ ಪಾಲಿಕೆಗಳ ಬಜೆಟ್ ಅನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ.
ಅಕ್ಟೋಬರ್ 10ರಂದು ನಡೆದ ಜಿಬಿಎ ಸಭೆಯಲ್ಲಿ, ಬಿಬಿಎಂಪಿಯಾಗಿದ್ದಾಗ 2025–26ನೇ ಸಾಲಿಗೆ ಮಂಡಿಸಲಾಗಿದ್ದ ₹20,440.33 ಕೋಟಿ ಬಜೆಟ್ ಅನ್ನು, ಐದು ನಗರ ಪಾಲಿಕೆಗಳಿಗೆ ವಿಭಜನೆ ಮಾಡಿದ್ದ ಬಜೆಟ್‌ಗೆ ಅನುಮೋದನೆ ದೊರೆತಿತ್ತು. ಒಟ್ಟಾರೆ ಬಜೆಟ್ ಗಾತ್ರ ₹7,972.66 ಕೋಟಿಯಷ್ಟಾಗಿತ್ತು. ಇದನ್ನು ₹6,001 ಕೋಟಿಗೆ ಕಡಿತಗೊಳಿಸಿ, ಯಾವುದಕ್ಕೆ ಎಷ್ಟು ವೆಚ್ಚ ಮಾಡಬೇಕು ಎಂಬುದನ್ನು ‘ಬಜೆಟ್ ಕೋಡ್’ ನೀಡಿ ವೆಚ್ಚಗಳನ್ನು ಮರುವಿಂಗಡಿಸಲಾಗಿದೆ.
2025ರ ಸೆಪ್ಟೆಂಬರ್ 1ರಿಂದ 2026ರ ಮಾರ್ಚ್ 31ರವರೆಗೆ ಐದು ನಗರ ಪಾಲಿಕೆಗಳು ಹಾಗೂ ಜಿಬಿಎ ಬಜೆಟ್ ಅನ್ನು ಮಂಜೂರು ಮಾಡಲಾಗಿದ್ದು, ಒಟ್ಟಾರೆ ಬಜೆಟ್ ಗಾತ್ರದಲ್ಲಿ ಜಿಬಿಎ ಪಾಲು ₹2,932 ಕೋಟಿಯಾಗಿದೆ.
ಕೌನ್ಸಿಲ್, ಸಾಮಾನ್ಯ ಆಡಳಿತ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ವೈದ್ಯಕೀಯ, ಸಾರ್ವಜನಿಕ ಕಾಮಗಾರಿ, ಕಂದಾಯ, ಘನತ್ಯಾಜ್ಯ ನಿರ್ವಹಣೆ, ನಗರ ಯೋಜನೆ, ನಗರ ಅರಣ್ಯೀಕರಣ, ಕಲ್ಯಾಣ ವಿಭಾಗಗಳಲ್ಲಿ ಕಾಮಗಾರಿಗಳಿಗೆ ಕೋಡ್ ನೀಡಿ, ಯಾವ ನಗರ ಪಾಲಿಕೆಗಳು ಎಷ್ಟು ಹಣ ವೆಚ್ಚ ಮಾಡಬೇಕು ಎಂಬುದನ್ನೂ ತಿಳಿಸಲಾಗಿದೆ.
ನಗರ ಪಾಲಿಕೆಗಳ ಚುನಾವಣೆಗಾಗಿ ₹100 ಕೋಟಿಯನ್ನು ಮೀಸಲಿಡಲಾಗಿದ್ದು, ಅದನ್ನು ಜಿಬಿಎ ಬಾಬ್ತಿನಲ್ಲಿ ವೆಚ್ಚ ಮಾಡಲಾಗುತ್ತದೆ. ಬಜೆಟ್‌ನ ಬಹುಪಾಲು ಮೊತ್ತ ಘನತ್ಯಾಜ್ಯ ನಿರ್ವಹಣೆಗೆ ನೀಡಲಾಗುತ್ತಿದ್ದು, ನಗರ ಪಾಲಿಕೆಗಳ ಆದಾಯದಿಂದಲೇ ಅದನ್ನು ಭರಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.