ಬೆಂಗಳೂರು
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ)– 2024 ಪರಿಣಾಮ ಬೀರುವಲ್ಲಿ 10 ಅಂಕದಲ್ಲಿ 3.4 ಅಂಕ ಮಾತ್ರ ಗಳಿಸಿದೆ ಎಂದು ಜನಾಗ್ರಹ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ.
‘ಬೆಂಗಳೂರು ಆಡಳಿತವನ್ನು ಪರಿವರ್ತಿಸಲು ಸರ್ಕಾರ ಜಿಬಿಜಿಎ ಕಾಯ್ದೆಯನ್ನು ಜಾರಿಗೆ ತಂದಿತ್ತು. ಕಾಯ್ದೆ ಸುಧಾರಣೆ ಹಾಗೂ ಕೊರತೆಗಳನ್ನು ಗುರುತಿಸಲು ಜನಾಗ್ರಹ ಸಮಗ್ರ ವಿಶ್ಲೇಷಣೆ ನಡೆಸಿತು. 33 ವಿಷಯಗಳೊಂದಿಗೆ ಬಿಬಿಎಂಪಿ ಕಾಯ್ದೆ– 2020, ಕರ್ನಾಟಕ ಮುನಿಸಿಪಲ್ ಕಾಯ್ದೆಯೊಂದಿಗೆ ಹೋಲಿಕೆ ಮಾಡಿ ಅಧ್ಯಯನ ಮಾಡಿದೆ.
ಈ ಅಧ್ಯಯನದ ವರದಿಯನ್ನು ಜನಾಗ್ರಹ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ್ದು, 10 ಅಂಕಗಳಲ್ಲಿ 3.4 ಅಂಕಗಳನ್ನು ಮಾತ್ರ ಜಿಬಿಜಿಎ ಕಾಯ್ದೆ ಪಡೆದುಕೊಂಡಿದೆ. ಪಾಲಿಕೆಗಳ ಹಣಕಾಸು, ಸಿಬ್ಬಂದಿ ನೇಮಕಾತಿಯಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಿದ್ದು, ಯೋಜನೆ ಸಬಲೀಕರಣ, ರಾಜಕೀಯ ನಾಯಕತ್ವ, ನಾಗರಿಕರ ಭಾಗವಹಿಸುವಿಕೆಯಂತಹ ನಿರ್ಣಾಯಕ ಅಂಶಗಳಲ್ಲಿ ಕಾಯ್ದೆ ವಿಫಲವಾಗಿದೆ ಎಂದು ವರದಿ ತಿಳಿಸಿದೆ.
‘ವರದಿಯಿಂದ ಹೊರಬಂದಿರುವ ನ್ಯೂನತೆಗಳನ್ನು ಬಹಿರಂಗಪಡಿಸುವ ಜೊತೆಗೆ, ಶೀಘ್ರ ಚುನಾವಣೆ ನಡೆಸಲು ಜನಾಗ್ರಹ ಮೂರು ಸಲಹೆಗಳನ್ನೂ ನೀಡಿದೆ’ ಎಂದು ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್ ತಿಳಿಸಿದರು.
‘ಬೆಂಗಳೂರಿನ ನಾಗರಿಕರಿಗೆ ಕಾನೂನುಬದ್ಧ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ನಗರ ಪಾಲಿಕೆಗಳನ್ನು ಸ್ಥಾಪಿಸಿ, ವಾರ್ಡ್ ವಿಂಗಡಿಸಿ, ಮೀಸಲಾತಿಯನ್ನು ಪೂರ್ಣಗೊಳಿಸಿ 2026ರ ಮಾರ್ಚ್‌ನೊಳಗೆ ಚುನಾವಣೆ ನಡೆಸಬೇಕು. ಮೇಯರ್ ಚುನಾವಣೆ, ವಾರ್ಡ್ ಸಮಿತಿ ಕಾರ್ಯನಿರ್ವಹಣೆ, ಬಜೆಟ್, ಸ್ಥಾಯಿ ಸಮಿತಿಗಳ ರಚನೆ, ಬೆಂಗಳೂರು ಮಹಾನಗರ ಯೋಜನಾ ಸಮಿತಿ ಸ್ಥಾಪನೆಯ ನಿಬಂಧನೆಗಳನ್ನು ಆರು ತಿಂಗಳೊಳಗೆ ತಿಳಿಸಬೇಕು’ ಎಂದರು.
‘ಮೂರನೆಯದಾಗಿ, ಕಾಯ್ದೆಗೆ ನಿರ್ಣಾಯಕ ತಿದ್ದುಪಡಿಗಳನ್ನು ತರಬೇಕು. ಅದರಲ್ಲಿ, ನಗರ ಪಾಲಿಕೆಗೆ ಪೂರ್ಣಾವಧಿ ಮೇಯರ್ ವ್ಯವಸ್ಥೆ ಇರಬೇಕು. ವಾರ್ಡ್ ಸಮಿತಿಗಳಿಗೆ ನಿಧಿ ಮತ್ತು ಯೋಜನಾ ಅಧಿಕಾರವನ್ನು ನೀಡಬೇಕು. ವಾರ್ಡ್ ಸಭೆಗಳನ್ನು ಕಡ್ಡಾಯಗೊಳಿಸಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.