ADVERTISEMENT

ಬೆಂಗಳೂರು | 5 ನಗರ ಪಾಲಿಕೆ ರಚನೆಗೆ ಸಜ್ಜು: ಅಸ್ತಿತ್ವಕ್ಕೆ ಬಾರದ ‘ಜಿಬಿಎ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 0:16 IST
Last Updated 8 ಜುಲೈ 2025, 0:16 IST
‘ಗ್ರೇಟರ್‌ ಬೆಂಗಳೂರು’ ನಿರೀಕ್ಷಿತ ವ್ಯಾಪ್ತಿ
‘ಗ್ರೇಟರ್‌ ಬೆಂಗಳೂರು’ ನಿರೀಕ್ಷಿತ ವ್ಯಾಪ್ತಿ   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಪ‍್ರದೇಶ’ದ ವ್ಯಾಪ್ತಿಯಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಲು ಸರ್ಕಾರ ಸಜ್ಜಾಗಿದೆ.

‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ– 2024’ ರಚಿಸಿದ್ದ ತಜ್ಞರ ಸಮಿತಿ ಹಾಗೂ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯ ಮುಖ್ಯಸ್ಥರು, ನಗರದಲ್ಲಿ ಉತ್ತಮ ಆಡಳಿತ ನಿರ್ವಹಣೆಗೆ ಐದು ನಗರ ಪಾಲಿಕೆಗಳನ್ನು ರಚಿಸಬೇಕು ಎಂದು ವರದಿ ನೀಡಿದ್ದಾರೆ. ಅದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಹುತೇಕ ಸಮ್ಮತಿಯನ್ನೂ ನೀಡಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಎಂದು ಐದು ನಗರ ಪಾಲಿಕೆಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ. ಈ ಮೊದಲು ಮೂರು ನಗರ ಪಾಲಿಕೆ ರಚಿಸಬೇಕು ಎಂಬ ಸಲಹೆ ಇತ್ತಾದರೂ, ‘ಗ್ರೇಟರ್‌ ಬೆಂಗಳೂರು ಪ್ರದೇಶ’ವನ್ನು 1000ಕ್ಕೂ ಹೆಚ್ಚು ಚದರ ಕಿ.ಮೀ ವ್ಯಾಪ್ತಿಗೆ ಹಿಗ್ಗಿಸಿಕೊಳ್ಳುವ ಚಿಂತನೆ ಇದೆ. ಹೀಗಾಗಿ, ಮೂರು ನಗರ ಪಾಲಿಕೆ ರಚನೆಯಾದರೆ, ಮತ್ತೆ ಆಡಳಿತಕ್ಕೆ ತೊಡಕಾಗುತ್ತದೆ. ಆದ್ದರಿಂದ ಐದು ನಗರ ಪಾಲಿಕೆಗಳು ರಚನೆಯಾಗಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ADVERTISEMENT

27 ವಿಧಾನಸಭಾ ಕ್ಷೇತ್ರಗಳನ್ನು ಅವುಗಳ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಐದು ನಗರ ಪಾಲಿಕೆಗಳ ವ್ಯಾಪ್ತಿಗೆ ತರಲಾಗುತ್ತದೆ. ಒಂದು ವಿಧಾನಸಬಾ ಕ್ಷೇತ್ರದ ಎಲ್ಲ ಪ್ರದೇಶಗಳು ಒಂದೇ ನಗರ ಪಾಲಿಕೆಯಲ್ಲಿರುವಂತೆ ಯೋಜಿಸಲಾಗಿದೆ.

708 ಚದರ ಕಿ.ಮೀ ವ್ಯಾಪ್ತಿಯಲ್ಲಿದ್ದ ಬಿಬಿಎಂಪಿ ಪ್ರದೇಶವನ್ನೇ ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಮೇ 15ರಂದು ಅಧಿಸೂಚಿಸಲಾಗಿತ್ತು. ಅದೇ ಪ್ರದೇಶದಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಲಾಗುತ್ತದೆ. ನಂತರ, ಅದರ ಸುತ್ತಲಿನ ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿ ಸೇರಿದಂತೆ ಹಲವು ಪ್ರದೇಶಗಳನ್ನು ಸೇರಿಸಿಕೊಳ್ಳಲು ಚಿಂತಿಸಲಾಗಿದೆ.

ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ, ಬಿಡದಿಗಳನ್ನು ಉಪನಗರಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಆರು ಉಪನಗರಗಳ ನಡುವಿನ ಪ್ರದೇಶವನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಳ್ಳಬೇಕು ಎಂಬ ಸ್ಥಳೀಯ ಜನಪ್ರತಿನಿಧಿಗಳ ಆಗ್ರಹವೂ ಇದೆ.

120 ದಿನಗಳ ಗಡುವು: ‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ– 2024’ ಅನ್ನು 2025ರ ಮೇ 15ರಿಂದ ಜಾರಿಗೊಳಿಸಲಾಗಿದೆ. ಈ ಕಾಯ್ದೆಯಂತೆ ಬಿಬಿಎಂಪಿ ವ್ಯಾಪ್ತಿಯನ್ನೇ ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಅಂದೇ ಅಧಿಸೂಚಿಸಲಾಗಿದೆ. ಈ ಕಾಯ್ದೆ ಜಾರಿಯಾದ 120 ದಿನಗಳಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ರಚನೆಯಾಗಬೇಕು ಎಂದು ಕಾಯ್ದೆಯ ‘ಅಧ್ಯಾಯ –3’ರಲ್ಲಿ ತಿಳಿಸಲಾಗಿದೆ.

ಶಾಸಕರು ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಸದಸ್ಯರನ್ನಾಗಿಸಬೇಕು. ಇದಕ್ಕೆ ಮುಖ್ಯ ಆಯುಕ್ತರನ್ನೂ ನೇಮಿಸಬೇಕು. ಆದರೆ ಈ ಬಗ್ಗೆ ಇನ್ನೂ ಅಧಿಸೂಚನೆಯಾಗಿಲ್ಲ. ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು, ಬೆಂಗಳೂರು ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ‘ಕಾರ್ಯಕಾರಿ ಸಮಿತಿ’ಯ ರಚನೆಯೂ ಆಗಬೇಕು. 

‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ– 2024’ ಜಾರಿಯಾದ ಮೇಲೆ, ಆದಷ್ಟು ಬೇಗ, ಗರಿಷ್ಠ ಏಳು ನಗರ ಪಾಲಿಕೆಗಳನ್ನು ರಚಿಸಬೇಕು ಎಂದು ಕಾಯ್ದೆಯ ‘ಅಧ್ಯಾಯ 5’ರಲ್ಲಿ ತಿಳಿಸಲಾಗಿದೆ.

‌ಸಚಿವ ಸಂಪುಟದ ಮುಂದೆ ವರದಿ: ಡಿಕೆಶಿ

ಬೆಂಗಳೂರು: ‘ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆದ ನಂತರ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ’ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ  ಅವರು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಕುರಿತು ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪಾಲಿಕೆಗಳನ್ನು ಹೇಗೆ ವಿಂಗಡಿಸಬೇಕು ಎಂಬುದರ ಬಗ್ಗೆ ಸಮಿತಿಯವರು ಅಂತಿಮ ವರದಿ ನೀಡಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ಸಮಿತಿ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ಇದಾದ ಬಳಿಕ ಸಚಿವ ಸಂಪುಟ ಸಭೆಯ ಮುಂದೆ ವರದಿ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಈಗ ಹಾಲಿ ಇರುವ ಪಾಲಿಕೆ ವ್ಯಾಪ್ತಿಯಲ್ಲೇ ಇದನ್ನು ಜಾರಿಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಣೆ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ ಆದಷ್ಟು ಬೇಗ ಚುನಾವಣೆ ನಡೆಸಬೇಕಿದೆ’ ಎಂದು ತಿಳಿಸಿದರು.

‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ– 2024’

13 ಮಾರ್ಚ್‌ 2025; ಮಸೂದೆಗೆ ವಿಧಾನಮಂಡಲದಲ್ಲಿ ಅಂಗೀಕಾರ 24 ಏ‍ಪ್ರಿಲ್‌ 2025; ಮಸೂದೆಗೆ ರಾಜ್ಯಪಾಲರ ಅಂಕಿತ 15 ಮೇ 2025; ಕಾಯ್ದೆ ಜಾರಿಗೊಳಿಸಿ ಸರ್ಕಾರದ ಅಧಿಸೂಚನೆ 15 ಮೇ 2025; ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಘೋಷಣೆ 12 ಸೆಪ್ಟೆಂಬರ್‌ 2025; ಮುಖ್ಯಮಂತ್ರಿ ನೇತೃತ್ವದ ‘ಜಿಬಿಎ’ ರಚನೆಗೆ ಗಡುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.