ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಸಿರುಮಯ ವಾತಾವರಣ ನಿರ್ಮಾಣ ಮಾಡಿರುವುದಕ್ಕಾಗಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ಸ್ (ಐಜಿಬಿಸಿ) ಕೊಡಮಾಡುವ ಪ್ರತಿಷ್ಠಿತ ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಶಸ್ತಿಗೆ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (ಬಿಎಸಿಎಲ್) ಭಾಜನವಾಗಿದೆ.
ವಿಮಾನ ನಿಲ್ದಾಣದಲ್ಲಿ ಹಸಿರು ಮಯ ವಾತಾವರಣ, ವಿನ್ಯಾಸ, ನೀತಿ, ಭೂಬಳಕೆ ವರ್ಗೀಕರಣ, ನೀರಿನ ನಿರ್ವಹಣೆ, ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ, ಮಾಹಿತಿ ಮತ್ತು ತಂತ್ರಜ್ಞಾನ (ಐಸಿಟಿ) ಹಸಿರು ಹೀಗೆ ಹತ್ತಾರು ಪರಿಸರ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಿರುವ ಉದ್ದೇಶದಿಂದ ಈ ಪ್ರಶಸ್ತಿಯು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಒಲಿದಿದೆ.
ನಿಲ್ದಾಣದಲ್ಲಿ ಸುಸ್ಥಿರ ನಗರಾಭಿವೃದ್ಧಿಗಾಗಿ ಹೊಸ ಮಾನದಂಡ ರೂಪಿಸಿರುವ ಬಿಎಸಿಎಲ್ ಸಮಗ್ರ ಸುಸ್ಥಿರ ಅಭಿವೃದ್ಧಿ ಸಾಧಿಸಿದೆ. ಇದಕ್ಕಾಗಿ ಬಿಲ್ಡರ್‌ಗಳು, ವಿನ್ಯಾಸಕರು ಮತ್ತು ವಾಸ್ತುಶಿಲ್ಪಿಗಳು ಅನುಸರಿಸುವ ಕಡ್ಡಾಯ ನೀತಿ ಮತ್ತು ವಿನ್ಯಾಸ ಮಧ್ಯಸ್ಥಿಕೆಗಳೊಂದಿಗೆ ಸುಸ್ಥಿರತೆ- ಕೇಂದ್ರಿತ ನಗರ ವಿನ್ಯಾಸ ಮಾರ್ಗಸೂಚಿಗಳನ್ನು ಒದಗಿಸುತ್ತದೆ.
ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್‌ನ ಸಿಇಒ ರಾವ್ ಮುನುಕುಟ್ಲ ಮಾತನಾಡಿ, ‘ಐಜಿಬಿಸಿ ಗ್ರೀನ್ ಸಿಟೀಸ್ ಪ್ರಮಾಣೀಕರಣ ಸ್ವೀಕರಿಸಲು ನಾವು ಹೆಮ್ಮೆಪಡುತ್ತೇವೆ. ಇದು ಸುಸ್ಥಿರತೆಗೆ ನಮ್ಮ ಅಚಲ ಬದ್ಧತೆಯನ್ನು ಗುರುತಿ ಸುತ್ತದೆ. ಈ ಮನ್ನಣೆಯು ಏರ್‌ಪೋರ್ಟ್ ಸಿಟಿಯ ಒಟ್ಟಾರೆ ವಿನ್ಯಾಸ ಸಂವೇದನೆಯ ಅಂಗೀಕಾರವಾಗಿದೆ. ಇದು ನಾವೀನ್ಯ ಮತ್ತು ಸುಸ್ಥಿರತೆ ಚಾಲಿತವಾಗಿದೆ. ನಮ್ಮ ಅಭಿವೃದ್ಧಿಯು ಸುಸ್ಥಿರತೆಯ ಎಲ್ಲಾ ಮೂರು ಕ್ಷೇತ್ರದ ಮೇಲೆ ಕೇಂದ್ರೀಕರಿಸುತ್ತದೆ’ ಎಂದು ತಿಳಿಸಿದ್ದಾರೆ.
‘ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಳಾದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಹೊಂದಾಣಿಕೆಯ ಗುರಿ ಹೊಂದಿದ್ದೇವೆ. ಈ ಪ್ರಮಾಣೀಕರಣವು ನಮ್ಮ ಸುಸ್ಥಿರತೆಯ ಪ್ರಯಾಣ ಮುಂದುವರಿಸಲು ಮತ್ತು ವಿಮಾನ ನಿಲ್ದಾಣ ಅದರ ಸುತ್ತಮುತ್ತಲಿನ ಸಮುದಾಯಗಳಿಗೆ ಹಸಿರು, ಹೆಚ್ಚು ಸಮರ್ಥನೀಯ ಭವಿಷ್ಯ ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಮಗೆ ಸ್ಫೂರ್ತಿಯಾಗಿದೆ’ ಎಂದಿದ್ದಾರೆ.
ಐಜಿಬಿಸಿ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರಾ ಅವರು, ‘ಬೆಂಗಳೂರು ಏರ್ ಪೋರ್ಟ್ ಸಿಟಿ ಲಿಮಿಟೆಡ್‌ಗೆ ಐಜಿಬಿಸಿ ಗ್ರೀನ್ ಸಿಟಿ ಪ್ಲಾಟಿನಂ ಪ್ರಮಾಣೀಕರಣ ನೀಡಲು ಸಂತೋಷಪಡುತ್ತೇವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.