ADVERTISEMENT

200 ಮಂದಿ ಬಡವರಿಗೆ ಪಲ್ಸ್ ಆಕ್ಸಿಮೀಟರ್

ಗ್ರೀನ್‌ವುಡ್ ಹೈ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳ ಸತ್ಕಾರ್ಯ/ಒಳ್ಳೆ ಸುದ್ದಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 6:06 IST
Last Updated 29 ಏಪ್ರಿಲ್ 2021, 6:06 IST

ಬೆಂಗಳೂರು: ಗ್ರೀನ್‌ವುಡ್ ಹೈ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಕೋವಿಡ್ ಪೀಡಿತರ ನೆರವಿಗೆ ಧಾವಿಸಿದ್ದು, ದಾನಿಗಳಿಂದ ₹ 2 ಲಕ್ಷ ಹಣವನ್ನು ಸಂಗ್ರಹಿಸುವ ಮೂಲಕ ಬಡ ಕುಟುಂಬಗಳ 200 ಕೋವಿಡ್‌ ಪೀಡಿತರಿಗೆ ಪಲ್ಸ್‌ ಆಕ್ಸಿಮೀಟರ್‌ ಒದಗಿಸಿದ್ದಾರೆ.

ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಶಾಲೆಯ ಸ್ನೇಹಾ ರಾಘವನ್ ಮತ್ತು ಶ್ಲೋಕಾ ಅಶೋಕ್ ನೇತೃತ್ವದಲ್ಲಿ 10 ವಿದ್ಯಾರ್ಥಿಗಳು ಸೇರಿ ಕೇವಲ 24 ಗಂಟೆಗಳ ಅವಧಿಯಲ್ಲಿ ಈ ಸತ್ಕಾರ್ಯ ಮಾಡಿದ್ದಾರೆ. ಸರ್ಕಾರೇತರ ಸಂಸ್ಥೆಗಳ ನೆರವನ್ನು ಪಡೆದ ವಿದ್ಯಾರ್ಥಿಗಳು, ಹಣ ಸಂಗ್ರಹಿಸಲು ಆನ್‌ಲೈನ್‌ನಲ್ಲಿ ಪ್ರತ್ಯೇಕ ಪುಟ ತೆರೆದಿದ್ದರು. ವಿವಿಧ ಕಂಪನಿಗಳಿಂದ ಕಡಿಮೆ ದರಕ್ಕೆ ಪಲ್ಸ್‌ ಆಕ್ಸಿಮೀಟರ್‌ ಖರೀದಿಸಿದ ಅವರು, ಕೊಳೆಗೇರಿ ನಿವಾಸಿಗಳು ಹಾಗೂ ಬಡಕುಟುಂಬದ ಕೋವಿಡ್‌ ಪೀಡಿತರಿಗೆ ಒದಗಿಸಿದ್ದಾರೆ.

‘ಸಾಂಕ್ರಾಮಿಕ ಕಾಯಿಲೆಯಾದ ಕೋವಿಡ್‌ಗೆ ಜಗತ್ತು ತಲ್ಲಣಗೊಂಡಿದೆ. ಹೀಗಾಗಿ, ಈ ಅವಧಿಯಲ್ಲಿ ನಾವು ಕೂಡ ಕಷ್ಟದಲ್ಲಿರುವವರಿಗೆ ಏನಾದರೂ ಮಾಡಬೇಕು ಅಂದುಕೊಂಡೆವು. ಸಾಮಾಜಿಕ ಕಾರ್ಯಕರ್ತೆಯಾದ ಅನುಪಮಾ ಪರೇಖ್ ಅವರು ಸೂಕ್ತ ಮಾರ್ಗದರ್ಶನ ನೀಡಿ, ಈ ಕಾರ್ಯಕೈಗೊಳ್ಳಲು ಪ್ರೋತ್ಸಾಹಿಸಿದರು. ಇದೇ ರೀತಿ, ಇನ್ನಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಲು ಉತ್ಸುಕನಾಗಿದ್ದೇನೆ. ಇಂತಹ ಕಾರ್ಯಚಟುವಟಿಯಲ್ಲಿ ತೊಡಗಿಕೊಳ್ಳಲುಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು’ ಎಂದು ಶ್ಲೋಕಾ ಅಶೋಕ್ ತಿಳಿಸಿದರು.

ADVERTISEMENT

‘ನಿಧಿ ಸಂಗ್ರಹ ಕಾರ್ಯಕ್ಕೆ ಉತ್ತಮವಾದ ಸ್ಪಂದನೆ ದೊರೆಯಿತು. ಈ ಉಪಕ್ರಮವು ನನಗೆ ಹಲವು ಪಾಠಗಳನ್ನು ಕಲಿಸುವ ಜತೆಗೆ ಇಂತಹಇನ್ನಷ್ಟು ಕಾರ್ಯಮಾಡಲು ಪ್ರೇರಣೆ ನೀಡಿದೆ’ ಎಂದು ಸ್ನೇಹಾ ರಾಘವನ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.