ಸಾಂದರ್ಭಿಕ ಚಿತ್ರ
ಬೆಂಗಳೂರು: ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಕಾರ್ಮಿಕನ ಬ್ಯಾಗ್‌ನಲ್ಲಿ ಹ್ಯಾಂಡ್ ಗ್ರೆನೇಡ್ ಸಿಕ್ಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು, ಆರೋಪಿಯನ್ನು ಕೆಲವು ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಬ್ಯಾಗ್‌ನಲ್ಲಿ ಗ್ರೆನೇಡ್ ಪತ್ತೆಯಾದ ಕಾರಣ ಮಾರ್ಚ್ 22ರಂದು ಆರೋಪಿ ಅಬ್ದುಲ್ ರೆಹಮಾನ್‌ನನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದರು. ರಾಜ್ಯ ಮತ್ತು ಕೇಂದ್ರ ಗುಪ್ತಚರ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, ಸಂಪಿಗೆಹಳ್ಳಿ ಪೊಲೀಸರ ವಶದಲ್ಲಿರುವ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಪ್ರಕರಣದ ತನಿಖೆ ನಡೆಸಿದ್ದರು. ತನಿಖೆ ವೇಳೆ ಕೆಲವು ಅಂಶಗಳು ಬಯಲಾಗಿವೆ.
‘ಆರೋಪಿಯನ್ನು ಒಂದು ವಾರ ವಿಚಾರಣೆಗೆ ಒಳಪಡಿಸಲಾಗಿತ್ತು. ಸ್ಥಳವೊಂದರಲ್ಲಿ ಸ್ಫೋಟಕ ಇಡಲು ಸಂಚು ರೂಪಿಸಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ’ ಎಂದು ಮೂಲಗಳು ಹೇಳಿವೆ.
‘ಹೋಟೆಲ್‌ಗೆ ಕೆಲಸಕ್ಕೆ ಸೇರುವುದಕ್ಕೂ ಮೊದಲು ಅರಮನೆ ಮೈದಾನದ ಬಳಿ ಕೆಲಸ ಮಾಡುತ್ತಿದ್ದೆ. ಆಗ ಪರಿಚಯವಾಗಿದ್ದ ವ್ಯಕ್ತಿಯೊಬ್ಬ, ಸ್ಫೋಟಕ ಕೊಟ್ಟಿದ್ದ. ಸಿಗರೇಟ್ ಮಾರಾಟ ಮಾಡುವ ಅಂಗಡಿಯೊಂದರ ಹೆಸರು ಹೇಳಿ, ಅಲ್ಲಿ ಬ್ಯಾಗ್ ಇಡುವಂತೆ ಸೂಚನೆ ನೀಡಿದ್ದ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಕೆಲವೊಮ್ಮೆ ಗೊಂದಲಕಾರಿ ಹೇಳಿಕೆಯನ್ನೂ ನೀಡಿದ್ದಾನೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಆಟೊ ಚಾಲಕನ ವಿಚಾರಣೆ: ಅರಮನೆ ಮೈದಾನದಿಂದ ಸಂಪಿಗೆಹಳ್ಳಿಯ ಹೋಟೆಲ್ ಬಳಿಗೆ ಆಟೊದಲ್ಲಿ ಆರೋಪಿ ತೆರಳಿದ್ದ. ಆಟೊ ಚಾಲಕನನ್ನು ಕರೆಸಿ, ವಿಚಾರಣೆ ನಡೆಸಲಾಗಿದೆ. ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಾಡಿಗೆಗೆ ಮಾತ್ರ ತೆರಳಿದ್ದಾಗಿ ಆಟೊ ಚಾಲಕ ತಿಳಿಸಿದ್ದಾನೆ. ಸದ್ಯ ರೆಹಮಾನ್ ಹೇಳಿಕೆ ದಾಖಲಿಸಿಕೊಂಡು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗ್ರೆನೇಡ್ ಪತ್ತೆ ಹೇಗೆ?: ‘ಥಣಿಸಂದ್ರದ ವೃತ್ತದಲ್ಲಿರುವ ಹೋಟೆಲ್‌ವೊಂದರಲ್ಲಿ ಆರೋಪಿ ಕೆಲಸಕ್ಕೆ ಸೇರಿಕೊಂಡಿದ್ದ. ಹೋಟೆಲ್ ಮಾಲೀಕರು, ಆರೋಪಿಯ ಆಧಾರ್ ಕಾರ್ಡ್ ಕೇಳಿದ್ದರು. ಎರಡು ದಿನವಾದರೂ ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡ ಮಾಲೀಕರು, ಆರೋಪಿಯ ಬ್ಯಾಗ್ ಪರಿಶೀಲನೆ ನಡೆಸಿದ್ದರು. ಬ್ಯಾಗ್‌ನಲ್ಲಿ ಚೆಂಡಿನ ಆಕಾರದ ವಸ್ತು ಪತ್ತೆಯಾಗಿತ್ತು. ಅದಕ್ಕೆ ಎರಡು ಬತ್ತಿಗಳಿದ್ದವು. ತಕ್ಷಣವೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ, ಅದು ಸ್ಫೋಟಕ ವಸ್ತು ಎಂಬುದು ಪತ್ತೆಯಾಗಿತ್ತು. ಬಳಿಕ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸುರಕ್ಷಿತ ಸ್ಥಳದಲ್ಲಿ ಸ್ಫೋಟಕ ವಸ್ತುವನ್ನು ನಾಶಪಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಕೋಗಿಲು ಮುಖ್ಯರಸ್ತೆಯ ಬೆಳ್ಳಹಳ್ಳಿ ನಿವಾಸಿ ಅಬ್ದುಲ್ ರೆಹಮಾನ್, ಈ ಮೊದಲು ಬೆಳ್ಳಹಳ್ಳಿಯಲ್ಲಿ ಪರಿಚಿತರೊಬ್ಬರ ಬಳಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ಬಿಟ್ಟು, ಚಿಂದಿ ಆಯುತ್ತಿದ್ದ. ತಾಯಿ ಮತ್ತು ಮಲ ತಂದೆ ಜತೆಗೆ ವಾಸವಾಗಿದ್ದ. ನಾಲ್ಕೈದು ತಿಂಗಳ ಹಿಂದೆ ಪೋಷಕರ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರಬಂದಿದ್ದ. ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.