ADVERTISEMENT

ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ

ಶಿವಪ್ರಕಾಶ್, ಕೃಷ್ಣಮೂರ್ತಿ, ವಿನಯಾಗೆ ‘ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 20:54 IST
Last Updated 7 ಫೆಬ್ರುವರಿ 2026, 20:54 IST
<div class="paragraphs"><p>ಕಾರ್ಯಕ್ರಮದಲ್ಲಿ&nbsp;ಎಚ್.ಎಸ್. ಶಿವಪ್ರಕಾಶ್, ಕೃಷ್ಣಮೂರ್ತಿ ಹನೂರು ಹಾಗೂ ‌ವಿನಯಾ ಒಕ್ಕುಂದ ಅವರಿಗೆ ‘ಡಾ.ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. </p></div>

ಕಾರ್ಯಕ್ರಮದಲ್ಲಿ ಎಚ್.ಎಸ್. ಶಿವಪ್ರಕಾಶ್, ಕೃಷ್ಣಮೂರ್ತಿ ಹನೂರು ಹಾಗೂ ‌ವಿನಯಾ ಒಕ್ಕುಂದ ಅವರಿಗೆ ‘ಡಾ.ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಜಿ.ಎಸ್. ಶಿವರುದ್ರಪ್ಪ ಅವರು ಯಾವುದೇ ಪಂಥ ಕಟ್ಟದ ಪರಿಣಾಮ, ಅವರ ಬಳಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸ್ವತಂತ್ರ ಯೋಚನಾ ಲಹರಿಯೊಂದಿಗೆ ಭಿನ್ನ ಮಾರ್ಗ ಅನುಸರಿಸಿದರು’ ಎಂದು ವಿಮರ್ಶಕ ಕೆ.ವಿ. ನಾರಾಯಣ ಅಭಿಪ್ರಾಯಪಟ್ಟರು. 

ADVERTISEMENT

ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ರಾಷ್ಟ್ರಕವಿ ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಳಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಕವಿ ಎಚ್.ಎಸ್. ಶಿವಪ್ರಕಾಶ್, ವಿಮರ್ಶಕ ಕೃಷ್ಣಮೂರ್ತಿ ಹನೂರು ಹಾಗೂ ಲೇಖಕಿ ವಿನಯಾ ಒಕ್ಕುಂದ ಅವರಿಗೆ ‘ಡಾ.ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.  

‘ಶಿವರುದ್ರಪ್ಪ ಅವರು ವೈಯಕ್ತಿಕ ಸಾಧನೆಯ ಜತೆಗೆ, ಕವಿ ಮತ್ತು ವಿಮರ್ಶಕರಾಗಿ ಕನ್ನಡ ಅಧ್ಯಯನ ಕೇಂದ್ರವು ಸಾಂಸ್ಕೃತಿಕವಾಗಿ ಬೆಳೆಯಲು ದಾರಿ ಮಾಡಿಕೊಟ್ಟರು. ಯಾವ ಕನ್ನಡ ಪ್ರಾಧ್ಯಾಪಕರು ಅವರ ರೀತಿ ಕೆಲಸ ಮಾಡಿಲ್ಲ. ಅವರ ವಿದ್ಯಾರ್ಥಿಯಾಗಿದ್ದ ನನಗೆ, ಮುಂದೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಅಕಾಡೆಮಿಕ್ ಮತ್ತು ವೈಯಕ್ತಿಕ ಬದುಕಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು’ ಎಂದು ಸ್ಮರಿಸಿಕೊಂಡರು. 

ವಿಮರ್ಶಕ ಬಸವರಾಜ ಕಲ್ಗುಡಿ, ‘ಜಿಎಸ್ಸೆಸ್ ಅವರು ಪಾಶ್ಚಿಮಾತ್ಯ ವಿಮರ್ಶೆಯ ಅನೇಕ ಕಲ್ಪನೆಯನ್ನು ಕನ್ನಡಕ್ಕೆ ಪರಿಚಯಿಸಿದರು. ದಕ್ಷಿಣದಲ್ಲಿ ಕುವೆಂಪು ಅವರ ಪ್ರಭಾವದಿಂದ ತಪ್ಪಿಸಿಕೊಂಡು, ಭಿನ್ನ ಮಾರ್ಗ ಅನುಸರಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮರ್ಶಕಿ ಎಂ.ಎಸ್. ಆಶಾದೇವಿ ಅವರು ಅಭಿನಂದನಾ ನುಡಿಗಳನ್ನಾಡಿದರು. ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಅವರು ರಚಿಸಿದ ‘ನಮ್ಮ ಮೇಷ್ಟ್ರು ಜಿಎಸ್ಸೆಸ್’ ಪುಸ್ತಕವನ್ನು ಇದೇ ವೇಳೆ ಜನಾರ್ಪಣೆ ಮಾಡಲಾಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರ‍ಪ್ಪ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಕುಮಾರ್ ಕೊಂಡಜ್ಜಿ, ನಿವೃತ್ತ ಪ್ರಾಧ್ಯಾಪಕ ನಟರಾಜ ಬೂದಾಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.