ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಬೆಂಗಳೂರು: ಕನ್ನಡಿಗರಿಗೆ ಅಪಮಾನ ಆಗುವಂತೆ ಡಿಜಿಟಲ್ ಬೋರ್ಡ್‌ನಲ್ಲಿ ಅವಾಚ್ಯ ಬರಹ ಪ್ರಕಟಿಸಿದ್ದ ಆರೋಪದ ಮೇಲೆ ಜಿ.ಎಸ್. ಸೂಟ್ಸ್ ಹೋಟೆಲ್ ವ್ಯವಸ್ಥಾಪಕ, ಕೇರಳದ ಕಾಸರಗೋಡಿನ ಸರ್ಫರಾಜ್(32) ಎಂಬಾತನನ್ನು ಬಂಧಿಸಿರುವ ಮಡಿವಾಳ ಠಾಣೆಯ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೊಂದೆಡೆ ಹೋಟೆಲ್‌ನ ಮಾಲೀಕ ಜಮ್ಶಾದ್ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
‘ಜಮ್ಶಾದ್ ಅವರು ಸದ್ಯ ಕೇರಳ ದಲ್ಲಿದ್ದು, ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ’ ಎಂದು ಗೊತ್ತಾಗಿದೆ.
ಮೇ 16ರಂದು ರಾತ್ರಿ ತಾವರೆಕೆರೆ ಮುಖ್ಯರಸ್ತೆಯ ಜಿ.ಎಸ್. ಸೂಟ್ಸ್ ಹೋಟೆಲ್‌ನ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವಂತಹ ವಾಕ್ಯವನ್ನು ಪ್ರಕಟಿಸಲಾಗಿತ್ತು. ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆಯೇ ಮಡಿವಾಳ ಠಾಣೆ ಪೊಲೀಸರು, ತಾವರೆಕೆರೆ ಮುಖ್ಯರಸ್ತೆಯ ಭವನಪ್ಪ ಲೇಔಟ್‌ನಲ್ಲಿ ಇರುವ ಜಿ.ಎಸ್. ಸೂಟ್ಸ್ ಮಾಲೀಕ ಜಮ್ಶಾದ್ ಮತ್ತು ವ್ಯವಸ್ಥಾಪಕ ಸರ್ಫರಾಜ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
‘ಕೇರಳದ ಕಾಸರಗೋಡು ಮೂಲದ ಸರ್ಫರಾಜ್, 5 ತಿಂಗಳ ಹಿಂದೆ ಜಿ.ಎಸ್. ಸೂಟ್ಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
‘ಹ್ಯಾಕ್ ಮಾಡಿದ್ದಾರೆ, ಆನ್ ಮಾಡದಂತೆ ಸೂಚಿಸಿದ್ದೆ’
ಡಿಜಿಟಲ್ ಬೋರ್ಡ್ ಮಾಡಿಕೊಟ್ಟ ರಾಯ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಕೇರಳದ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಅನಾರೋಗ್ಯದ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದೆ. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಮಡಿವಾಳದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಅಂಗಡಿ ನಡೆಸುತ್ತಿದ್ದೇನೆ. ಜಿ.ಎಸ್. ಸೂಟ್ಸ್ ಹೋಟೆಲ್‌ಗೆ ಕೆಲವು ತಿಂಗಳ ಹಿಂದೆ ಡಿಜಿಟಲ್ ಬೋರ್ಡ್ ತಯಾರಿಸಿಕೊಟ್ಟಿದ್ದು, ಅದಕ್ಕೆ ವೈ–ಫೈ ವ್ಯವಸ್ಥೆಯೂ ಇತ್ತು ಎಂಬುದಾಗಿ ವಿಚಾರಣೆ ವೇಳೆ ರಾಯ್ ಮಾಹಿತಿ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಡಿಜಿಟಲ್ ಬೋರ್ಡ್‌ನಲ್ಲಿ ಅನಗತ್ಯ ಪದಗಳು ಬರುತ್ತಿವೆ ಎಂಬುದಾಗಿ ಹೋಟೆಲ್ ವ್ಯವಸ್ಥಾಪಕ ಮಾಹಿತಿ ನೀಡಿದ್ದರು. ಹೋಟೆಲ್‌ಗೆ ಹೋಗಿ ಪರಿಶೀಲಿಸಿ, ಪಾಸ್‌ವರ್ಡ್ ಹಾಕಿ ಬದಲಾವಣೆಗೆ ಮುಂದಾಗಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಗೊತ್ತಾಗಿತ್ತು. ಬೋರ್ಡ್‌ನ ಮದರ್ ಬೋರ್ಡ್ ಬದಲಾಯಿಸಬೇಕಿದ್ದು, ಆನ್ ಮಾಡದಂತೆ ತಿಳಿಸಿದ್ದೆ. ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ’ ಎಂಬುದಾಗಿ ರಾಯ್ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.