ADVERTISEMENT

ಜಿಎಸ್‌ಟಿ ಯಾರ ಕೂಸು?: ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 20:13 IST
Last Updated 8 ಡಿಸೆಂಬರ್ 2020, 20:13 IST
ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)   

ಬೆಂಗಳೂರು:ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತು ಕಾಂಗ್ರೆಸ್‌– ಬಿಜೆಪಿ ಸದಸ್ಯರ ಮಧ್ಯೆ ಕಾವೇರಿದ ಚರ್ಚೆಗೆ ವಿಧಾನಸಭೆ ಮಂಗಳವಾರ ವೇದಿಕೆಯಾಯಿತು.

‘ಜಿಎಸ್‌ಟಿ ಮೂಲಕ ಶೇ 28 ರಷ್ಟು ತೆರಿಗೆ ವಿಧಿಸಿ ಸಾರ್ವಜನಿಕರ ಮೇಲೆ ಬರೆ ಎಳೆದಿದ್ದೀರಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೃಷಿ ಬೆಂಬಲ ಬೆಲೆಯ ಕುರಿತ ಚರ್ಚೆಯಲ್ಲಿ ವಾಗ್ದಾಳಿ ನಡೆಸಿದರು.

ಇದರಿಂದ ಸಿಟ್ಟಿಗೆದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಜಿಎಸ್‌ಟಿ ನಿಮ್ಮದೇ ಕೂಸು. ಸಂಸತ್ತಿನಲ್ಲಿ ಮಂಡಿಸಿದವರೂ ನೀವೇ. ಬಳಿಕ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ಮೇಲೆ, ಆ ಕಾಯ್ದೆಗೆ ಕೆಲವು ಅಗತ್ಯ ತಿದ್ದುಪಡಿಗಳನ್ನು ತಂದು ಜಾರಿ ಮಾಡಿದೆವು. ಅದರ ಮೂಲ ಸೃಷ್ಟಿಕರ್ತರು ನೀವೇ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಅದು ನಮ್ಮದೇ ಕೂಸು ನಿಜ. ಆದರೆ, ನೀವು ಕೆಟ್ಟ ರೀತಿಯಲ್ಲಿ ಜಾರಿ ಮಾಡಿದ್ದೀರಿ. ಅದರಿಂದಾಗಿ ಸಮಸ್ಯೆ ಉದ್ಭವಿಸಿದೆ’ ಎಂದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಈಗ ನೀವು ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಜಿಎಸ್‌ಟಿ ಮಸೂದೆ ಅಂಗೀಕಾರವಾದ ಬಳಿಕ ಉನ್ನತ ಅಧಿಕಾರ ಸಮಿತಿಯನ್ನು ರಚಿಸಲಾಯಿತು. ಅದರಲ್ಲಿ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ನೀವೂ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಇದ್ದರು. ಅಲ್ಲಿ ಆದ ನಿರ್ಣಯವನ್ನು ನೀವು ಒಪ್ಪಿಕೊಂಡಿಲ್ಲವೇ. ನಡಾವಳಿ ದಾಖಲೆಯನ್ನು ತೆಗೆದು ನೋಡಿ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಎಸ್‌ಟಿಯಿಂದ ನಷ್ಟ ಹೊಂದುವ ರಾಜ್ಯಗಳಿಗೆ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. 2021 ಕ್ಕೆ ಅದರ ಅವಧಿ ಮುಗಿಯುತ್ತದೆ. ರಾಜ್ಯಕ್ಕೆ ನಷ್ಟದ ಪರಿಹಾರ ಇನ್ನೂ ಬಂದಿಲ್ಲ. ಮುಂದಿನ ವರ್ಷದ ವೇಳೆಗೆ ರಾಜ್ಯಕ್ಕೆ ₹27 ಸಾವಿರ ಕೋಟಿವರೆಗೆ ಖೋತಾ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.