
ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ ಸೌಮ್ಯಾ ಸ್ವಾಮಿನಾಥನ್ ಅವರನ್ನು ಶಾಲಿನಿ ರಜನೀಶ್ ಸನ್ಮಾನಿಸಿದರು. ಉಮಾ ಮಹದೇವನ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಅದರಲ್ಲಿಯೂ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ. ನಿತ್ಯದ ವೆಚ್ಚ ಕಡಿತ, ಖಾತೆಗೆ ಹಣ ಬರುತ್ತಿರುವುದರಿಂದ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ’ ಎಂದು ಎಂ.ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ ಸೌಮ್ಯಾ ಸ್ವಾಮಿನಾಥನ್ ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮದ ಕುರಿತು ವಿತ್ತೀಯ ಕಾರ್ಯನೀತಿ ಸಂಸ್ಥೆಯು ಐದು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವವರಲ್ಲಿ ಶೇ 60ರಷ್ಟು ಮಹಿಳೆಯರೇ ಆಗಿದ್ದಾರೆ. ಇದು ಯೋಜನೆ ಜಾರಿಯಾಗುವುದಕ್ಕಿಂತ ಹಿಂದಿನ ಸಂಖ್ಯೆಗೆ ಹೋಲಿಸಿದರೆ ಎರಡು ಪಟ್ಟು ಆಗಿದೆ. ಮಹಿಳೆಯರಿಗೆ ಪ್ರಯಾಣ ವೆಚ್ಚ ಉಳಿತಾಯವಾಗಿದೆ ಎಂದು ವಿವರಿಸಿದರು.
ಗೃಹಲಕ್ಷ್ಮೀ ಯೋಜನೆಯಿಂದಾಗಿ ಪ್ರತಿ ಮನೆಯ ಮಹಿಳೆಗೆ ತಿಂಗಳಿಗೆ ₹2,000 ಬರುತ್ತಿರುವುದು ಮಹಿಳೆಯರ ಕೈಯಲ್ಲಿ ದುಡ್ಡು ಓಡಾಡುವಂತಾಗಿದೆ. ಅನ್ನಭಾಗ್ಯದಿಂದಾಗಿ ಜನ ಹಸಿವಿನಿಂದ ಕಂಗೆಡುವುದು ತಪ್ಪಿದೆ. ಉಳಿದ ಗೃಹಜ್ಯೋತಿ, ಯುವನಿಧಿ ಯೋಜನೆಗಳು ಜನರಿಗೆ ಅನುಕೂಲ ಮಾಡಿಕೊಟ್ಟಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ‘ವಿಶ್ವ ಸಂಸ್ಥೆಯು ಗೊತ್ತು ಮಾಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ನೆರವಾಗಿವೆ’ ಎಂದು ಹೇಳಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ ವಿಶಾಲ್ ಆರ್., ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸೂರಜ್ ಎಂ.ಎನ್. ಹೆಗ್ಡೆ, ದಿನೇಶ್ ಗೂಳಿಗೌಡ, ಪುಷ್ಪಾ ಅಮರನಾಥ್, ಎಸ್.ಆರ್. ಮೆಹರೋಜ್ ಖಾನ್ ಉಪಸ್ಥಿತರಿದ್ದರು.
ತಲಾದಾಯ ಹೆಚ್ಚಳ: ಸಿ.ಎಂ
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆಗೆ ವೇಗ ಸಿಕ್ಕಿದ್ದು ತಲಾದಾಯದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಅವರ ಲಿಖಿತ ಭಾಷಣವನ್ನು ಹಣಕಾಸು ಇಲಾಖೆಯ ಕಾರ್ಯದರ್ಶಿ ವಿಶಾಲ್ ಆರ್. ಓದಿದರು. ‘ಮತದಾರರಿಗೆ ಕೊಟ್ಟಿದ್ದ ಭರವಸೆ ಈಡೇರಿಸಲು ನಾವು ಅಧಿಕಾರ ವಹಿಸಿಕೊಂಡ ತಕ್ಷಣವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇವುಗಳ ಅನುಷ್ಠಾನಕ್ಕಾಗಿ ₹ 96 ಸಾವಿರ ಕೋಟಿ ಹಂಚಿಕೆ ಮಾಡಿದ್ದೇವೆ. 2025-26ರ ಬಜೆಟ್‌ನಲ್ಲಿ ₹51034 ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಅವರು ಹೇಳಿದ್ದಾರೆ. ‘4 ಸದಸ್ಯರು ಇರುವ ಕುಟುಂಬ ತಿಂಗಳಿಗೆ ಸರಾಸರಿ ₹ 10 ಸಾವಿರ ಪ್ರಯೋಜನ ಪಡೆಯುತ್ತಿದೆ. ಇದರಿಂದಾಗಿ ಆರ್ಥಿಕ ಸ್ಥಿರತೆ ಸಿಕ್ಕಿದೆ. ಸಾಲದ ಅವಲಂಬನೆ ತಗ್ಗಿದೆ. ಬಡತನ ಅಸಮಾನತೆ ಹೋಗಲಾಡಿಸಿದೆ. ಮಹಿಳಾ ಸಬಲೀಕರಣ ಮಾತ್ರವಲ್ಲದೆ ಸಾಮಾಜಿಕ ನ್ಯಾಯವೂ ಸಿಕ್ಕಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆ ಕೂಡಾ ಶ್ಲಾಘಿಸಿದೆ’ ಎಂದರು.
ವರದಿಗಳಲ್ಲಿ ಉಲ್ಲೇಖ
ಲಂಡನ್‌ನ ಕಿಂಗ್ಸ್ ಕಾಲೇಜು ಲೋಕನೀತಿ–ಸಿಎಸ್‌ಡಿಎಸ್ ಮತ್ತು ಇಂಡಸ್ ಆ್ಯಕ್ಷನ್ ಎಕ್ಸ್ ಕೆಡಿಆರ್ ವೇದಿಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಜಸ್ಟ್‌ಜಾಬ್ ನೆಟ್‌ವರ್ಕ್‌ಗಳು ಗ್ಯಾರಂಟಿಯ ವಿವಿಧ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿವೆ. ಗ್ಯಾರಂಟಿಯಿಂದ ಉಂಟಾಗಿರುವ ಬದಲಾವಣೆಗಳು ಯೋಜನೆಗಳಿಂದ ಉಳಿತಾಯವಾದ ಹಣವನ್ನು ಹೇಗೆ? ಯಾವುದಕ್ಕೆ ಉಪಯೋಗಿಸುತ್ತಾರೆ. ‘ಶಕ್ತಿ’ಯಲ್ಲಿ ಸಂಚರಿಸುವ ಮಹಿಳೆಯರಲ್ಲಿ ಉದ್ಯೋಗಕ್ಕಾಗಿ ಹೋಗುವವರ ಪ್ರಮಾಣ ಇತರ ಕಾರಣಕ್ಕೆ ಸಂಚರಿಸುವವರು.. ಹೀಗೆ ವಿವಿಧ ವಿಚಾರಗಳ ಬಗ್ಗೆ ವರದಿಗಳು ಬೆಳಕು ಚೆಲ್ಲಿವೆ.