ADVERTISEMENT

ಬೆಂಗಳೂರಿನ ಪಿಜಿ ಕೇಂದ್ರಗಳಿಗೆ ಶೀಘ್ರದಲ್ಲಿ ಮಾರ್ಗಸೂಚಿ: ಬಿಬಿಎಂಪಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 19:54 IST
Last Updated 18 ನವೆಂಬರ್ 2023, 19:54 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ (ಪಿಜಿ) ಕೇಂದ್ರಗಳ ಅಸಮರ್ಪಕ ನಿರ್ವಹಣೆಯನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ನಗರದಲ್ಲಿ ಪಿಜಿ ಕೇಂದ್ರಗಳ ಸಂಖ್ಯೆ ವಿಪರೀತವಾಗಿ ಏರುತ್ತಿದೆ. ಆದರೆ, ಅಲ್ಲಿ ಸರಿಯಾದ ಸೌಲಭ್ಯಗಳಿಲ್ಲದೇ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸ್ವಚ್ಛತೆ ಇಲ್ಲದಿರುವುದು, ಸಣ್ಣ ಸ್ಥಳಾವಕಾಶದಲ್ಲಿ ಹೆಚ್ಚು ಜನರನ್ನು ಇಟ್ಟುಕೊಳ್ಳುವುದು ಮುಂತಾದ ಆರೋಪಗಳು ಪಿ.ಜಿ. ಕೇಂದ್ರಗಳ ಮೇಲಿವೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

‘ಅವ್ಯವಸ್ಥೆಗಳನ್ನು ಸರಿಪಡಿಸಲು, ಸಮರ್ಪಕವಾಗಿ ಕಾರ್ಯನಿರ್ವಹಿಸಲು ನಿಯಮ ರೂಪಿಸಬೇಕಿದೆ. ಪಿಜಿ ಕೇಂದ್ರಗಳನ್ನು ತೆರೆಯಬೇಕಿದ್ದರೆ ವಾಣಿಜ್ಯ ಪರವಾನಗಿ ಪಡೆಯಬೇಕು. ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ನಿಯಮ ಪಾಲಿಸದ ಪಿಜಿ ಕೇಂದ್ರಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗುವುದು’ ಎಂದು ವಿವರಿಸಿದರು.

ಪಿಜಿ ಕೇಂದ್ರಗಳಿರುವ ಕಟ್ಟಡಗಳ ವಿಸ್ತೀರ್ಣ ಎಷ್ಟಿರಬೇಕು. ಆಯಾ ವಿಸ್ತೀರ್ಣಕ್ಕೆ ಸರಿಯಾಗಿ ಎಷ್ಟು ಜನರಿಗೆ ವಸತಿ ಕಲ್ಪಿಸಬಹುದು ಎಂಬುದರ ಬಗ್ಗೆಯೂ ನಿಯಮ ರೂಪಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.