ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಬ್ಯಾಂಕ್ ಅಧ್ಯಕ್ಷ ಕೆ. ರಾಮಕೃಷ್ಣ ಕೊನೆಗೂ ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಇವರ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಸಿಐಡಿ ಇತ್ತೀಚೆಗಷ್ಟೇ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು.
‘ಬ್ಯಾಂಕ್ ಅವ್ಯವಹಾರ ಸಂಬಂಧ ರಾಮಕೃಷ್ಣ ಹಾಗೂ ಬ್ಯಾಂಕ್‌ನ 7 ನಿರ್ದೇಶಕರನ್ನು ಹೊರರಾಜ್ಯದಲ್ಲಿ ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 18ಕ್ಕೆ ಏರಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.
‘ತಲೆಮರೆಸಿಕೊಂಡಿದ್ದ ರಾಮಕೃಷ್ಣ, ಹಲವೆಡೆ ಓಡಾಡುತ್ತಿದ್ದರು. ಅವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿತ್ತು. ಇತ್ತೀಚೆಗೆ ಲಭ್ಯವಾಗಿದ್ದ ಸುಳಿವು ಆಧರಿಸಿ ಸಿಐಡಿಯ ವಿಶೇಷ ತಂಡ ಹೊರ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಎಲ್ಲರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದರು.
‘ರಾಜ್ಯಸಭಾ ಚುನಾವಣೆಗೂ ಸ್ಪರ್ಧಿಸಿದ್ದ ರಾಮಕೃಷ್ಣ, ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿ ಆಗಿದ್ದಾರೆ. ಅವರ ಕೆಲ ಸಂಬಂಧಿಕರನ್ನೂ ಬಂಧಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.