ADVERTISEMENT

ಡ್ರಗ್ಸ್; ಆರೋಪಿಗಳ ತಲೆ ಕೂದಲು ಮಾದರಿ ವಾಪಸು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:41 IST
Last Updated 2 ಅಕ್ಟೋಬರ್ 2020, 20:41 IST
ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ
ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ   

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿರುವ ಆರೋಪಿಗಳಿಂದ ಸಂಗ್ರಹಿಸಿದ್ದ ತಲೆ ಕೂದಲು ಮಾದರಿಯನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಾಪಸು ಕಳುಹಿಸಿದ್ದಾರೆ.

ಈ ಮೂಲಕ ಸಿಸಿಬಿ ಪೊಲೀಸರು ಪುರಾವೆ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ವಹಿಸಿ ಎಡವಟ್ಟು ಮಾಡಿರುವ ಅನುಮಾನ ವ್ಯಕ್ತವಾಗಿದೆ.

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರೆ ಆರೋಪಿಗಳು ಮಾದಕ ವ್ಯಸನಿಗಳಾಗಿರುವ ಅನುಮಾನವಿತ್ತು. ಅದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದ ಸಿಸಿಬಿ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ಮೂತ್ರ, ರಕ್ತ ಹಾಗೂ ತಲೆ ಕೂದಲು ಪರೀಕ್ಷೆಗೆ ಮಾದರಿ ಸಂಗ್ರಹಿಸಿದ್ದರು.

ADVERTISEMENT

ಎಲ್ಲ ಮಾದರಿಗಳನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕವೇ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

‘ತಲೆ ಕೂದಲು ಮಾದರಿ ಕಳುಹಿಸಿರುವ ವಿಧಾನ ವೈಜ್ಞಾನಿಕವಾಗಿಲ್ಲ' ಎಂದು ಅಭಿಪ್ರಾಯಪಟ್ಟಿರುವ ಹೈದರಾಬಾದ್ ಪ್ರಯೋಗಾಲಯದ ತಜ್ಞರು, ಮತ್ತೊಮ್ಮೆ ಮಾದರಿಯನ್ನು ಕಳುಹಿಸುವಂತೆ ಕೋರಿದ್ದಾರೆ. ಹೊಸದಾಗಿ ಮಾದರಿ ಸಿದ್ಧಪಡಿಸಿರುವ ಸಿಸಿಬಿ ಪೊಲೀಸರು, ಸದ್ಯದಲ್ಲೇ ಕಳುಹಿಸಿಕೊಡಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, 'ಸಣ್ಣ ತಾಂತ್ರಿಕ ಕಾರಣದಿಂದ ಈ ರೀತಿಯಾಗಿದೆ. ಈಗ ಎಲ್ಲವೂ ಸರಿಯಾಗಿದೆ' ಎಂದಿದ್ದಾರೆ.

'ರಕ್ತ ಹಾಗೂ ಮೂತ್ರದ ಮಾದರಿಯು ಈಗಾಗಲೇ ಪ್ರಯೋಗಾಲಯದಲ್ಲಿ ಇದೆ. ರಾಜ್ಯದಲ್ಲೇ ಮೊದಲ ಬಾರಿಗೆ ತಲೆ ಕೂದಲು ಪರೀಕ್ಷೆ ಮಾಡಿಸಲಾಗಿದೆ. ಪ್ರಕರಣಕ್ಕೆ ಸಾಕ್ಷ್ಯ ಆಗಬಲ್ಲ ಹಲವು ತಾಂತ್ರಿಕ ಪುರಾವೆಗಳು, ಜಪ್ತಿ ಮಾಡಲಾದ ವಸ್ತುಗಳು ಹಾಗೂ ಇತರೆ ಅಂಶಗಳು ನಮ್ಮ ಬಳಿ ಇದೆ' ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.