ADVERTISEMENT

ಎಚ್‌ಎಎಲ್‌: ಎರಡು ಯುದ್ಧ ಹೆಲಿಕಾಪ್ಟರ್‌ಗಳು ಲೇಹ್‌ನಲ್ಲಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 11:42 IST
Last Updated 12 ಆಗಸ್ಟ್ 2020, 11:42 IST
ಹೆಲಿಕಾಪ್ಟರ್‌
ಹೆಲಿಕಾಪ್ಟರ್‌   

ಬೆಂಗಳೂರು:ಎಚ್ಎಎಲ್‌ ತಯಾರಿಸಿರುವ ಎರಡು ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್) ಭಾರತೀಯ ವಾಯುಪಡೆ ಲೇಹ್‌ನ ಅತಿ ಎತ್ತರ ಪ್ರದೇಶದಲ್ಲಿ ಕಾರ್ಯಚರಣೆಗೆ ನಿಯೋಜನೆ ಮಾಡಿದೆ.

ಅತ್ಯಂತ ಅಲ್ಪಾವಧಿಯಲ್ಲಿ ಭಾರತೀಯ ವಾಯುಪಡೆಯ ಕೋರಿಕೆ ಮೇರೆಗೆ ಈ ಹೆಲಿಕಾಪ್ಟರ್‌ಗಳನ್ನು ವಾಯುಪಡೆಯ ಕಾರ್ಯಾಚರಣೆಗೆ ನೀಡಲಾಗಿದೆ ಎಂದು ಎಚ್‌ಎಎಲ್‌ ಪ್ರಕಟಣೆ ತಿಳಿಸಿದೆ.

ವಿಶ್ವದಲ್ಲಿ ಆಕ್ರಮಣ ನಡೆಸುವ ಹಗುರ ತೂಕದ ಹೆಲಿಕಾಪ್ಟರ್‌ (ಎಲ್‌ಸಿಎಚ್) ಇದಾಗಿದೆ. ಇದರ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಎಚ್‌ಎಎಸ್‌ ಸಂಸ್ಥೆಯೇ ಮಾಡಿದೆ. ಆತ್ಮನಿರ್ಭರ್‌ ಭಾರತ್‌ ಯೋಜನೆ ಅಡಿ ಭಾರತೀಯ ಸೇನೆಯ ವೈಮಾನಿಕ ಅಗತ್ಯಗಳನ್ನು ಪೂರೈಸಲು ಎಚ್‌ಎಎಲ್‌ ಸದಾ ಸಿದ್ಧವಿದೆ ಎಂದು ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್ ತಿಳಿಸಿದ್ದಾರೆ.

ADVERTISEMENT

ಇತ್ತೀಚೆಗೆ ಅತಿ ಎತ್ತರದ ಪ್ರದೇಶದಲ್ಲಿ ನಡೆದ ಪರೀಕ್ಷಾರ್ಥ ಕಾರ್ಯಾಚರಣೆಯಲ್ಲಿ ವಾಯುಪಡೆಯ ಉಪ ಮುಖ್ಯಸ್ಥ, ಏರ್‌ ಮಾರ್ಷಲ್‌ ಹರ್ಜಿತ್‌ಸಿಂಗ್ ಅರೋರಾ ಅವರು ಭಾಗವಹಿಸಿದ್ದರು. ಅತ್ಯಂತ ಎತ್ತರದ ಪ್ರದೇಶದಿಂದಲೇ ನಭಕ್ಕೆ ಜಿಗಿದು ಹಾರಾಟ ನಡೆಸಿದ್ದು ಅಲ್ಲದೇ, ಅತಿ ಎತ್ತರ ಪ್ರದೇಶದಲ್ಲಿದ್ದ ಗುರಿಯನ್ನು ಯಶಸ್ವಿಯಾಗಿ ಧ್ವಂಸಗೊಳಿಸಿತು. ದುರ್ಗಮ ಪ್ರದೇಶದಲ್ಲಿದ್ದ ಸಂಕೀರ್ಣ ಎನಿಸಿದ ಹೆಲಿಪ್ಯಾಡ್‌ ಮೇಲೆ ಹೆಲಿಕಾಪ್ಟರ್‌ ಇಳಿಯಿತು. ಪ್ರತಿಕೂಲ ಹವಾಮಾನದಲ್ಲೂ ಸೈನಿಕರನ್ನು ಮುಂಚೂಣಿ ಪ್ರದೇಶದಲ್ಲಿ ತ್ವರಿತಗತಿಯಲ್ಲಿ ನಿಯೋಜನಗೊಳಿಸುವ ಸಾಮರ್ಥ್ಯವನ್ನು ಎಲ್‌ಸಿಎಸ್‌ ಹೊಂದಿದೆ.

ಎಲ್‌ಸಿಎಚ್‌ ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದು, ಹಗಲು ಅಥವಾ ರಾತ್ರಿ ವೇಳೆಯಲ್ಲೂ ಕರಾರು ವಾಕ್ಕಾಗಿ ಶಸ್ತ್ರಾಸ್ತ್ರಗಳನ್ನು ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಎಂತಹುದೇ ಹವಾಮಾನದಲ್ಲೂ ಎತ್ತರದ ಪ್ರದೇಶಗಳಿಗೆ ಅಸ್ತ್ರಗಳನ್ನು ಈ ಹೆಲಿಕಾಪ್ಟರ್‌ಗಳು ಹೊತ್ತೊಯ್ಯಲಿವೆ.

ವಾಯುಪಡೆ ಮತ್ತು ಭೂಸೇನೆ ಸೇರಿ ಒಟ್ಟು 160 ಎಲ್‌ಸಿಎಚ್‌ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇಟ್ಟಿವೆ. ರಕ್ಷಣಾ ಸಂಗ್ರಹಣಾ ಮಂಡಳಿ(ಡಿಸಿಎ) ಇದಕ್ಕೆ ಒಪ್ಪಿಗೆ ನೀಡಿದ್ದು, ಮೊದಲ ಬ್ಯಾಚ್‌ನಲ್ಲಿ 15 ಎಲ್‌ಸಿಎಚ್‌ಗಳನ್ನು ಪೂರೈಕೆ ಮಾಡಲಾಗುವುದು ಎಂದು ಎಚ್‌ಎಎಲ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.