ADVERTISEMENT

ಹಲಸೂರು ಮಾರುಕಟ್ಟೆ ನೆಲಸಮಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 17:14 IST
Last Updated 14 ಏಪ್ರಿಲ್ 2022, 17:14 IST

ಬೆಂಗಳೂರು: ಶಿಥಿಲಾವಸ್ಥೆಯಲ್ಲಿ ಇರುವ ಬಜಾರ್ ಸ್ಟ್ರೀಟ್‌ ಹಲಸೂರು ಮಾರುಕಟ್ಟೆ ನೆಲಸಮಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

‘ಮಾರುಕಟ್ಟೆ ಸಂಕೀರ್ಣವು 70 ವರ್ಷಕ್ಕಿಂತ ಹಳೆಯದಾಗಿದ್ದು, ನಮ್ಮ ಎಂಜಿನಿಯರ್‌ಗಳು ಮಾರುಕಟ್ಟೆ ಸಮೀಕ್ಷೆ ಮಾಡಿದ್ದಾರೆ. ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕಿದ್ದು, ಈ ಸಂಬಂಧ ನೋಟಿಸ್ ನೀಡಿದ್ದೇವೆ’ ಎಂದು ಬಿಬಿಎಂಪಿ ಉಪ ಆಯುಕ್ತ(ಮಾರುಕಟ್ಟೆಗಳು) ಕೆ.ಮರಳೀಧರ್ ತಿಳಿಸಿದರು.

ಮಾರುಕಟ್ಟೆ ತೆರವುಗೊಳಿಸುವ ನೋಟಿಸ್ ಸ್ವೀಕರಿಸಲು ವರ್ತಕರು ನಿರಾಕರಿಸಿದ್ದಾರೆ. ‘ನಮ್ಮ ಬದುಕು ಕಸಿದುಕೊಳ್ಳಲು ಬಿಬಿಎಂಪಿ ಹೊರಟಿದೆ. ಮಾರುಕಟ್ಟೆ ನೆಲಸಮದ ಬಗ್ಗೆ ಯಾವುದೇ ಅಧಿಕಾರಿಯೂ ನಮ್ಮೊಂದಿಗೆ ಚರ್ಚಿಸಿಲ್ಲ. ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ತೆರವುಗೊಳಿಸಲು ಮುಂದಾದರೆ ನಾವು ಎಲ್ಲಿ ಹೋಗಬೇಕು’ ಎಂದು ವ್ಯಾಪಾರಿ ಸೈಯದ್ ಮುಕಿಯಾ ಪ್ರಶ್ನಿಸಿದರು.

ADVERTISEMENT

‘ಮಾರುಕಟ್ಟೆ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಕಳೆದ ವರ್ಷದ ಮಳೆಯಲ್ಲಿ ಹಲವು ಅಂಗಡಿಗಳಿಗೆ ಹಾನಿಯಾಗಿದೆ. ಯಾವುದೇ ಅಧಿಕಾರಿಯೂ ನಮಗೆ ಸಹಾಯ ಮಾಡಿಲ್ಲ. ಎಲ್ಲವನ್ನು ನಾವೇ ನಿರ್ವಹಣೆ ಮಾಡಿಕೊಂಡಿದ್ದೇವೆ’ ಎಂದು ವರ್ತಕರು ಹೇಳಿದರು.

‘ಮಾರುಕಟ್ಟೆಯ ಪರಿಸ್ಥಿತಿ ಗಮನಿಸಿದರೆ ಕೂಡಲೇ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕಿದೆ. ಹೊಸದಾಗಿ ಮಾರುಕಟ್ಟೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುತ್ತೇವೆ. ಅನುದಾನ ದೊರೆಯದಿದ್ದರೆ ಈ ಮಾರುಕಟ್ಟೆಯನ್ನೇ ನವೀಕರಿಸುತ್ತೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.