ADVERTISEMENT

ಹಲಸೂರು: ವೈಟ್‌ಟಾಪಿಂಗ್‌ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:09 IST
Last Updated 1 ಮಾರ್ಚ್ 2019, 20:09 IST
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹುತಾತ್ಮ ಯೋಧ ಮಂಡ್ಯದ ಗುರು ಅವರ ಪೋಷಕರಿಗೆ ₹ 5 ಲಕ್ಷ ನೆರವನ್ನು ಮೇಯರ್‌ ಗಂಗಾಬಿಕೆ ಹಸ್ತಾಂತರಿಸಿದರು. ಸಂಘದ ಪದಾಧಿಕಾರಿಗಳು ಇದ್ದರು. 
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹುತಾತ್ಮ ಯೋಧ ಮಂಡ್ಯದ ಗುರು ಅವರ ಪೋಷಕರಿಗೆ ₹ 5 ಲಕ್ಷ ನೆರವನ್ನು ಮೇಯರ್‌ ಗಂಗಾಬಿಕೆ ಹಸ್ತಾಂತರಿಸಿದರು. ಸಂಘದ ಪದಾಧಿಕಾರಿಗಳು ಇದ್ದರು.    

ಬೆಂಗಳೂರು: ಮೇಯರ್‌ ಗಂಗಾಬಿಕೆ ಅವರು ಶುಕ್ರವಾರ ನಗರದ ಹಲವೆಡೆ ಸಾರ್ವಜನಿಕ ಸೇವೆಯ ವ್ಯವಸ್ಥೆಗಳನ್ನು ಉದ್ಘಾಟಿಸಿ, ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.

ಅವರ ದಿನಚರಿ ಬನ್ನೇರುಘಟ್ಟ ರಸ್ತೆಯ ಜೆ.ಡಿ.ಮರ ಜಂಕ್ಷನ್‌ಗೆ ‘ನಾರಾಯಣ ಗುರು ಜಂಕ್ಷನ್‌’ ಎಂದು ನಾಮಕರಣ ಮಾಡುವ ಸಮಾರಂಭದ ಮೂಲಕ ಆರಂಭವಾಯಿತು. ಈ ಪ್ರದೇಶದಲ್ಲಿ ವಾಸಿಸುವ ಬಿಲ್ಲವರು, ಈ ಜಂಕ್ಷನ್‌ಗೆ ನಾರಾಯಣ ಗುರು ಹೆಸರಿಡಲು 2017ರಿಂದ ಒತ್ತಾಯಿಸುತ್ತಲೇ ಬಂದಿದ್ದರು. ಅವರ ಬೇಡಿಕೆಗೆ ಪಾಲಿಕೆ ಸ್ಪಂದಿಸಿದೆ.

ಬಳಿಕ, ಮೇಯರ್‌ ಅವರು ಹಲಸೂರಿನ ಆದರ್ಶ ಚಿತ್ರಮಂದಿರ ಜಂಕ್ಷನ್‌ನಿಂದ ಇಂದಿರಾನಗರದ ಕೆಎಫ್‌ಸಿ ಜಂಕ್ಷನ್‌ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿಗೆ ಚಾಲನೆ ನೀಡಿದರು.

ADVERTISEMENT

‘ಈ ರಸ್ತೆ ಅಡಿಯಲ್ಲಿ ಇರುವ ನೀರು ಪೂರೈಕೆ, ಚರಂಡಿ ನೀರಿನ ಕೊಳವೆ ಹಾಗೂ ವಿದ್ಯುತ್‌ ಸರಬರಾಜು, ಸಂಪರ್ಕ ಸೇವೆಯ ಕೇಬಲ್‌ಗಳನ್ನು ಮೊದಲು ಸ್ಥಳಾಂತರ ಮಾಡುತ್ತೇವೆ. ನಂತರ ಸಂಚಾರ ಮಾರ್ಗವನ್ನು ಬದಲಿಸಿ, ಹೊಸ ರಸ್ತೆ ನಿರ್ಮಾಣ ಕೆಲಸ ಪ್ರಾರಂಭಿಸುತ್ತೇವೆ’ ಹೊಯ್ಸಳನಗರ ವಾರ್ಡ್‌ ಎಂಜಿನಿಯರ್‌ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ ವೇಳೆ ಮೇಯರ್‌ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮರ್ಫಿಟೌನ್‌ ಮಾರುಕಟ್ಟೆ ಬಳಿ ನಿರ್ಮಿಸಿರುವ ಉಚಿತ ಬಳಕೆಯ ಸಾರ್ವಜನಿಕ ಶೌಚಾಲಯ, ಲಕ್ಷ್ಮೀಪುರ ಹಿಂದೂ ಸ್ಮಶಾನದಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆಯನ್ನು ಉದ್ಘಾಟಿಸಿದರು.

ನಂತರ, ಟ್ಯಾನರಿ ರಸ್ತೆ ವಿಸ್ತರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.