ADVERTISEMENT

ಅಂಗವಿಕಲರ ಸಮಸ್ಯೆ: ಗಮನ ಸೆಳೆಯಲು ವಿಭಿನ್ನ ತಂತ್ರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:02 IST
Last Updated 13 ಫೆಬ್ರುವರಿ 2021, 19:02 IST
ಸಮಿತಿ ಸದಸ್ಯರು ಮಳಿಗೆಯಲ್ಲಿ ಅಂಗವಿಕಲರ ಪ್ರಮುಖ ಬೇಡಿಕೆಗಳನ್ನು ಮುದ್ರಿಸುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು
ಸಮಿತಿ ಸದಸ್ಯರು ಮಳಿಗೆಯಲ್ಲಿ ಅಂಗವಿಕಲರ ಪ್ರಮುಖ ಬೇಡಿಕೆಗಳನ್ನು ಮುದ್ರಿಸುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು   

ಬೆಂಗಳೂರು: ಅಂಗವಿಕಲರ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಕರ್ನಾಟಕ ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿಯು ವಿಭಿನ್ನ ತಂತ್ರವನ್ನು ಅನುಸರಿಸಿತು.

ಅಂಗವಿಕಲರ ದಿನಾಚರಣೆ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಳಿಗೆಯನ್ನು ತೆರೆದಿದ್ದ ಸಮಿತಿ, ಅದರ ಮೂರೂ ಪಾರ್ಶ್ವಗಳಲ್ಲೂ ದಪ್ಪ ಅಕ್ಷರಗಳಲ್ಲಿ ಅಂಗವಿಕಲರ ಬೇಡಿಕೆ ಮತ್ತು ಸಲಹೆಗಳನ್ನು ಮುದ್ರಿಸಿ ಪ್ರಕಟಿಸಿತ್ತು. ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಮಿತಿಯವರು ತಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಿದರು.

‘ಇಲಾಖೆ ಸ್ಥಾಪನೆಯಾದ ಸಮಯದಲ್ಲಿ ರೂಪಿಸಲಾಗಿರುವ ನೀತಿಗಳನ್ನೇ ಇದುವರೆಗೂ ಮುಂದುವರಿಸಿಕೊಂಡು ಬಂದು ಯೋಜನೆ ರೂಪಿಸಲಾಗುತ್ತಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ಸೀಮಿತ ವರ್ಗಕ್ಕಷ್ಟೇ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ನೀತಿಯು ಕೆಲ ಎನ್‌ಜಿಒಗಳನ್ನಷ್ಟೇ ದಷ್ಟಪುಷ್ಟ ಮಾಡುತ್ತಿದೆ’ ಎಂದು ಸಮಿತಿ ದೂರಿದೆ.

ADVERTISEMENT

‘2016ರ ಅಂಗವಿಕಲ ಹಕ್ಕುಗಳ ಕಾಯ್ದೆಯಲ್ಲಿ ಉಲ್ಲೇಖಿಸಿರುವ 21 ಅಂಗವೈಕಲ್ಯಗಳ ಬಗ್ಗೆ ಗಣತಿ ನಡೆಯಬೇಕು. ಅಂಗವಿಕಲರ ವಿಭಾಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ತೆರೆಯಬೇಕು’ ಎಂದು ಸಮಿತಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.