ADVERTISEMENT

ಕೋವಿಡ್‌ ಸವಾಲು ಗೆದ್ದವರಲ್ಲಿ ಮಂದಹಾಸ

15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಮರಳಿ ಮನೆಗೆ l ಸೋಂಕಿತರಿಗೆ ಸಿಹಿಸುದ್ದಿ

ಗವಿ ಬ್ಯಾಳಿ
Published 6 ಏಪ್ರಿಲ್ 2020, 23:01 IST
Last Updated 6 ಏಪ್ರಿಲ್ 2020, 23:01 IST
   

ಬೆಂಗಳೂರು: ಕೋವಿಡ್‌–19 ಸೋಂಕಿನಿಂದಾಗಿಹದಿನೈದು ದಿನಗಳ ಹಿಂದೆ ನಗರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಈ ಮೂಲಕ ‘ಕೊರೊನಾ ಎಂದರೆ ಸಾವಲ್ಲ‘ ಎಂಬ ಸಂದೇಶವನ್ನು ಸಾರಿರುವ ಇವರು, ಕೊರೊನಾ ಸೋಂಕು ಪೀಡಿತರ ಮೊಗದಲ್ಲಿ ನಗು ಅರಳಿಸಿದ್ದಾರೆ !

ಕೇವಲ ಐದಾರು ದಿನಗಳ ಅಂತರದಲ್ಲಿ ಒಬ್ಬ ಮಹಿಳೆಯೂ ಸೇರಿದಂತೆ ಮೂವರು ಸೋಂಕಿತರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ಸೋಂಕಿತರ ಪ್ರತ್ಯೇಕ ವಾರ್ಡ್‌ ಮತ್ತು ಸೋಂಕು ಶಂಕಿತರ ಪ್ರತ್ಯೇಕ ನಿಗಾ ಕೇಂದ್ರದಲ್ಲಿರುವ ಇನ್ನೂ ಹಲವರುಈಗಾಗಲೇ ಗುಣಮುಖರಾಗಿದ್ದು, ಮನೆಗೆ ತೆರಳಲು ಸಿದ್ಧರಾಗಿದ್ದಾರೆ. ವೈದ್ಯರು ಇವರೆಲ್ಲರ ಎರಡನೇ ಬಾರಿಗೆ ರಕ್ತ ತಪಾಸಣೆ ಮತ್ತು ಗಂಟಲು ದ್ರವ ಮಾದರಿ ಪರೀಕ್ಷೆ ವರದಿಗಳಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಮೊದಲ ತಪಾಸಣೆಯಲ್ಲಿ ಇವರೆಲ್ಲರ ವರದಿಗಳು ನೆಗೆಟಿವ್‌ ಬಂದಿವೆ.

ADVERTISEMENT

‘ಬಿಡುಗಡೆಗೂ ಮುನ್ನ ಸೋಂಕು ಖಚಿತಪಡಿಸಿಕೊಳ್ಳಲು ಎರಡನೇ ಬಾರಿ ಪರೀಕ್ಷೆ ನಡೆಸಲಾಗಿದೆ. ಆ ವರದಿಗಳು ಕೂಡ ನೆಗೆಟಿವ್‌ ಬರುವ ಸಾಧ್ಯತೆ ಇದೆ‘ ಎನ್ನುವುದು ಚಿಕಿತ್ಸೆ ನೀಡುತ್ತಿರುವ ವೈದ್ಯರ ವಿಶ್ವಾಸ.

‘ಇನ್ನು ಕೆಲವೇ ದಿನಗಳಲ್ಲಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಇದು ಕೋವಿಡ್‌ ಸೋಂಕಿತರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಲಿದೆ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಜೀವನ ಶೈಲಿ, ಆಪ್ತ ಸಲಹೆ ಕಾರಣ: ಸೋಂಕಿತರ ಜೀವನಶೈಲಿಯಲ್ಲಿ ಗುಣಾತ್ಮಕ ಬದಲಾವಣೆ, ಪೌಷ್ಟಿಕ ಆಹಾರ ಸೇವನೆ, ರೋಗನಿರೋಧಕ ಶಕ್ತಿವೃದ್ಧಿ ಮತ್ತು ಮನೋರೋಗ ತಜ್ಞರುಪದೇ ಪದೇ ನಡೆಸುವ ಆಪ್ತ ಸಮಾಲೋಚನೆಗಳು ಈ ಸಕಾರಾತ್ಮಕ ಬದಲಾವಣೆಗೆ ಕಾರಣ ಎಂದು ವೈದ್ಯರು ಹೇಳುತ್ತಾರೆ.

‘14 ದಿನಗಳ ನಂತರ ಎರಡು ವರದಿಗಳ ಫಲಿತಾಂಶ ನೆಗೆಟಿವ್‌ ಬಂದರೆ ಮಾತ್ರ ಅವರನ್ನು ಮನೆಗೆ ಕಳಿಸಲಾಗುವುದು.ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ ನಂತರವೂ ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗಿದೆ. ವೈದ್ಯರು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಮನೋರೋಗ ತಜ್ಞರು ದೂರವಾಣಿಯಲ್ಲಿ ಆಪ್ತ ಸಮಾಲೋಚನೆ ನಡೆಸುತ್ತಾರೆ’ ಎಂದು ಕೆ.ಸಿ. ಜನರಲ್‌ ಆಸ್ಪತ್ರೆಯ ಅಧೀಕ್ಷಕ ಡಾ. ವೆಂಕಟೇಶಯ್ಯ ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಣಮುಖರಾದವರಲ್ಲಿ ಗೆಲುವು: ಗುಣಮುಖರಾಗಿ ಮನೆಗೆ ಹೋದವರು ಈಗ ಅತ್ಯಂತ ಗೆಲುವಾಗಿದ್ದಾರೆ. ಚಿಕಿತ್ಸೆಯ ಜತೆಗೆ ಬದುಕುವ ಆಸೆಯನ್ನು ಚಿಗುರಿಸಿ, ಆತ್ಮಸ್ಥೈರ್ಯ ನೀಡಿದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

‘ಎಂದಿಗೂ ನಮಗೆ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿರುವ ಅನುಭವವಾಗಲಿಲ್ಲ. ಮನೆಯ ವಾತಾವರಣವಿತ್ತು. ಎಲ್ಲ ಸಿಬ್ಬಂದಿಯೂ ನಮ್ಮನ್ನು ಚೆನ್ನಾಗಿ ನೋಡಿಕೊಂಡರು’ ಎಂದು ಗುಣಮುಖರಾಗಿ ಹೋದ ಮಹಿಳೆ ಇ–ಮೇಲ್‌ನಲ್ಲಿ ಅನುಭವ ಹಂಚಿಕೊಂಡಿದ್ದಾರೆ.

‘ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ ಎಂಬುದನ್ನು ಹೊರತುಪಡಿಸಿದರೆ ಆಸ್ಪತ್ರೆಯಲ್ಲಿ ಬೇರೆ ಯಾವ ಕೊರತೆಯೂ ಕಾಣಲಿಲ್ಲ. ಊಟ, ತಿಂಡಿ, ಆರೈಕೆ ಎಲ್ಲವೂ ಚೆನ್ನಾಗಿತ್ತು’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಅನ್ವಯ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿರಲ್ಲಿ ಮಹಿಳೆಯರು, ಮಧ್ಯ ವಯಸ್ಕರರೂ ಇದ್ದಾರೆ.

- ಡಾ. ವೆಂಕಟೇಶಯ್ಯ, ವೈದ್ಯಕೀಯ ಅಧೀಕ್ಷಕರು, ಕೆ.ಸಿ. ಜನರಲ್‌ ಆಸ್ಪತ್ರೆ

ಹೃದಯಸ್ಪರ್ಶಿ ಬೀಳ್ಕೊಡುಗೆ

ಕೆ.ಸಿ. ಜನರಲ್‌ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಸಂಭ್ರಮದ ವಾತಾವರಣ ಮನೆಮಾಡಿತ್ತು.

ಕೋವಿಡ್‌–19 ಸೋಂಕಿನಿಂದ ಗುಣಮುಖರಾಗಿ ಮನೆಗೆ ಹೊರಟು ನಿಂತವರಿಗೆ ಆಸ್ಪತ್ರೆಯ ದ್ವಾರದಲ್ಲಿ ಸಿಬ್ಬಂದಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಪ್ರತ್ಯೇಕ ವಾರ್ಡ್‌ ದ್ವಾರದಲ್ಲಿಹೂಗುಚ್ಛಗಳನ್ನು ಹಿಡಿದು ಸಾಲಾಗಿ ನಿಂತಿದ್ದ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ, ಶುಭ ಕೋರಿ ವಿದಾಯ ಹೇಳಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಿಯೂ ಹೂಗುಚ್ಛಗಳು ಸಿಗಲಿಲ್ಲ. ಕೊನೆಗೆ ಸಿಬ್ಬಂದಿಯೇ ಆಸ್ಪತ್ರೆಯ ಆವರಣದಲ್ಲಿದ್ದ ಬಳ್ಳಿಗಳಿಂದ ಹೂಗಳನ್ನು ಕಿತ್ತು ಹೂಗುಚ್ಛ ತಯಾರಿಸಿದ್ದರು. ಮಂದಹಾಸ ಬೀರುತ್ತ ಆತ್ಮವಿಶ್ವಾಸದಿಂದಹೊರಬಂದವರು ತಮಗೆ ದೊರೆತ ಈ ಅನಿರೀಕ್ಷಿತ ಬೀಳ್ಕೊಡುಗೆಯಿಂದ ಪುಳುಕಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.