ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಸ್ಥಾನ ಅಧಿಕಾರಿಗಳ ಕೈಯಿಂದ ಜನಪ್ರತಿನಿಧಿಗಳ ಕೈಗೆ ಮತ್ತೆ ಬಂದಿದೆ. ಸರ್ಕಾರ ಬಿಡುಗಡೆ ಮಾಡಿರುವ ನಿಗಮ–ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಹೆಸರು ಪ್ರಕಟಗೊಂಡಿದೆ.
ಬಿಜೆಪಿ ಆಡಳಿತದ ಕಾಲದಲ್ಲಿ ಆಗಿನ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅಧ್ಯಕ್ಷರಾಗಿದ್ದರು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ವಿಶ್ವನಾಥ್ ರಾಜೀನಾಮೆ ನೀಡಿದ್ದರು. ಎನ್.ಎ. ಹ್ಯಾರಿಸ್, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ ಸಹಿತ ಹಲವರು ಅಧ್ಯಕ್ಷ ಸ್ಥಾನಕ್ಕಾಗಿ ಆಗ ಪ್ರಯತ್ನಿಸಿದ್ದರು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನಪ್ರತಿನಿಧಿಗಳಿಗೆ ಮಣೆ ಹಾಕುವ ಪದ್ಧತಿಯನ್ನು ಬಿಟ್ಟು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು.
ಇದೀಗ ಎನ್.ಎ. ಹ್ಯಾರಿಸ್ ಹೆಸರು ಪ್ರಕಟವಾಗಿದೆ. ರಾಕೇಶ್ ಸಿಂಗ್ ಅವರ ಅಧಿಕಾರಾವಧಿ ಏಳು ತಿಂಗಳಿಗೆ ಕೊನೆಗೊಳ್ಳುತ್ತಿದೆ.
ಬಿಎಂಟಿಸಿಗೆ ಶಿವಣ್ಣ: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಅಧ್ಯಕ್ಷ ಸ್ಥಾನಕ್ಕೆ ಆನೇಕಲ್ ಶಾಸಕ ಬಿ. ಶಿವಣ್ಣ ಅವರ ಹೆಸರನ್ನು ಸರ್ಕಾರ ಪ್ರಕಟಿಸಿದೆ.
ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎನ್.ಎ. ಹ್ಯಾರಿಸ್ ಬಿಎಂಟಿಸಿ ಅಧ್ಯಕ್ಷರಾಗಿದ್ದರು. ಸಮ್ಮಿಶ್ರ ಸರ್ಕಾರ ಕೊನೆಗೊಂಡು ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಕೆ.ಆರ್. ಪುರದ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಎಂಟಿಸಿ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.