ADVERTISEMENT

ದ್ವೇಷ ಭಾಷಣ ಮಸೂದೆ: ಕಾನೂನು ಹೋರಾಟ– ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಪತ್ರಕರ್ತರ, ವಿರೋಧ ಪಕ್ಷದ ಧ್ವನಿ ಅಡಗಿಸಲು ಸರ್ಕಾರದ ಸಂಚು: ನಿಖಿಲ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 14:38 IST
Last Updated 12 ಡಿಸೆಂಬರ್ 2025, 14:38 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಬೆಂಗಳೂರು: ‘ದ್ವೇಷ ಭಾಷಣ ತಡೆಗೆ ಕಾಂಗ್ರೆಸ್ ಸರ್ಕಾರ ಕಾನೂನು ತರಲು ಹೊರಟಿರುವುದು ಪ್ರಜಾಪ್ರಭುತ್ವದ ಕೊಲೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ನಿರ್ಬಂಧಿಸುವ’ ಮಸೂದೆಗೆ ಪಕ್ಷದ ವಿರೋಧವಿದೆ. ಸಂವಿಧಾನ ನೀಡಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ವಿರೋಧ ಪಕ್ಷ ಹಾಗೂ ಪತ್ರಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ಮಸೂದೆ ಮೂಲಕ ಕಾಂಗ್ರೆಸ್ ಸರ್ಕಾರವು 1975ರ ತುರ್ತು ಪರಿಸ್ಥಿತಿಯನ್ನು ಮತ್ತೆ ತರುವ ಕುತಂತ್ರ ಮಾಡುತ್ತಿದೆ. ಸರ್ಕಾರ ಪತನವಾಗುವ ದಿನ ದೂರವಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಗೃಹ ಸಚಿವ ಪರಮೇಶ್ವರ ಅವರು ಮಸೂದೆ ಮಂಡಿಸಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ, ಮಸೂದೆಯನ್ನು ಬೇರೆ ಯಾರೋ ತಯಾರಿಸಿ ಗೃಹ ಸಚಿವರ ಮೂಲಕ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಜೆಡಿಎಸ್‌ ಹಾಗೂ ಬಿಜೆಪಿ ಹೋರಾಟ ಮಾಡಲಿದೆ’ ಎಂದು ಹೇಳಿದರು.

ADVERTISEMENT

ಆರು ತಿಂಗಳಿಂದ ಉತ್ತರ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕಾಟಾಚಾರದ ಅಧಿವೇಶನ ನಡೆಯುತ್ತಿದೆ. ನಾಡಿನ ಸಮಗ್ರ ಬೆಳವಣಿಗೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನಲ್ಲಿ ಸಂಚರಿಸಲು ₹47 ಕೋಟಿ ವೆಚ್ಚ ಮಾಡಲಾಗಿದೆ. ರಸ್ತೆಯಲ್ಲಿ ಓಡಾಡಿದರೆ ಗುಂಡಿಗಳ ಬಗ್ಗೆ ಗೊತ್ತಾಗುತ್ತಿತ್ತು ಎಂದರು. 

ಪಕ್ಷದ ಪ್ರಮುಖರ ಸಮಿತಿಯ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ, ವಕ್ತಾರರಾದ ಗಂಗಾಧರ್ ಮೂರ್ತಿ, ಪ್ರದೀಪ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.