ADVERTISEMENT

‘ರಹಸ್ಯ ಕ್ಯಾಮೆರಾ’ ಅಳವಡಿಸಿದ ಐ.ಟಿ

ಅಕ್ಕಿ ಗಿರಣಿ, ಸಕ್ಕರೆ ಕಾರ್ಖಾನೆಗಳ ಮೇಲೆ ‘ಕಣ್ಣು’: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 18:25 IST
Last Updated 30 ಮಾರ್ಚ್ 2019, 18:25 IST
   

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ಮಾಲೀಕತ್ವದ ಅಕ್ಕಿ ಗಿರಣಿ ಹಾಗೂ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ್ದು, ಈ ಸ್ಥಳಗಳಲ್ಲಿ ಗೂಢಚಾರಿ ಕ್ಯಾಮೆರಾ ಅಳವಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಟ್ವೀಟ್‌ ಮಾಡಿದ್ದು, ‘ಮಿತ್ರ ಪಕ್ಷಗಳ ಮುಖಂಡರನ್ನು ಬೆದರಿಸುವ ಹಾಗೂ ಭಯಪಡಿಸುವ ಉದ್ದೇಶದಿಂದ
ಐ.ಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.ಚುನಾವಣಾ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ಇದಕ್ಕೆ ತಡೆ ಹಾಕಬೇಕು’ ಎಂದು ಮನವಿ ಮಾಡಿದ್ದಾರೆ.

‘ರೈಲ್ವೆ ಅಧಿಕಾರಿಗಳು ಎಂದು ಹೇಳಿಕೊಂಡು ವಾಹನಗಳನ್ನು ಬಾಡಿಗೆಗೆ ಪಡೆದಿರುವ ಐ.ಟಿ ಅಧಿಕಾರಿಗಳು ಮೈಸೂರಿನ
ಕೇಂದ್ರ ಆಹಾರ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಉಳಿದುಕೊಂಡಿದ್ದಾರೆ’ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ADVERTISEMENT

‘ಕೆಲವೆಡೆ ನಡೆದ ಐ.ಟಿ ದಾಳಿ ಶನಿವಾರ ಬೆಳಿಗ್ಗೆ 4 ಗಂಟೆಯವರೆಗೂ ಮುಂದುವರಿದಿತ್ತು’ ಎಂದೂ ಅವರು ದೂರಿದ್ದಾರೆ.

ಸಣ್ಣ ನೀರಾವರಿ ಸಚಿವ ಸಿ.ಎಸ್‌.‍ಪುಟ್ಟರಾಜು ಅವರ ಸಂಬಂಧಿಕರು, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಆಪ್ತರ ಮನೆಗಳೂ ಒಳಗೊಂಡಂತೆ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಅನೇಕ ಕಡೆ ಗುರುವಾರ ಬೆಳಗಿನ ಜಾವ ದಾಳಿ ನಡೆದಿತ್ತು. ವಿವರಗಳನ್ನು ಐ.ಟಿ ಬಹಿರಂಗಪಡಿಸಿಲ್ಲ.

ಐ.ಟಿ ದಾಳಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ, ದಿನೇಶ್‌ ಗುಂಡೂರಾವ್‌ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಜೊತೆ ವೇದಿಕೆ ಹಂಚಿಕೊಂಡ ಎರಡು ದಿನಗಳ ಬಳಿಕ ಕುಮಾರಸ್ವಾಮಿ ಎರಡು ಟ್ವೀಟ್‌ಗಳನ್ನು ಮಾಡಿದ್ದಾರೆ.

‘ಐ.ಟಿ ಅಧಿಕಾರಿಗಳು ಆಡಳಿತ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಅವರು ಪ್ರತಿಭಟನೆಯ ಸಮಯದಲ್ಲಿ ದೂರಿದ್ದರು.

ಐ.ಟಿ ಇಲಾಖೆ ನಿರಾಕರಣೆ

‘ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರಿಗೆ ಸೇರಿರುವ ಅಕ್ಕಿ ಗಿರಣಿ ಮತ್ತು ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿಲ್ಲ’ ಎಂದು ಐ.ಟಿ ಮೂಲಗಳು ತಿಳಿಸಿವೆ.

‘ಇಲಾಖೆ ಎಲ್ಲಿಯೂ ಗೂಢಚಾರಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.