ADVERTISEMENT

ಮಧ್ಯಮ ವರ್ಗಕ್ಕೆ ಆರೋಗ್ಯ ಸೇವೆ: ಕರ್ನಾಟಕ ಮಾದರಿ

ಅನ್ನಪೂರ್ಣ ಸಿಂಗ್
Published 19 ನವೆಂಬರ್ 2019, 2:47 IST
Last Updated 19 ನವೆಂಬರ್ 2019, 2:47 IST

ನವದೆಹಲಿ: ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುವ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ನೀತಿ ಆಯೋಗ ಚಿಂತಿಸುತ್ತಿದೆ. ಬಡತನ ರೇಖೆಗಿಂತ ಮೇಲಿನ ಜನರಿಗೂ ಆರೋಗ್ಯ ಸೇವೆ ಒದಗಿಸುವ ಕರ್ನಾಟಕದ ಯೋಜನೆಯೇ ಇದಕ್ಕೆ ಮಾದರಿ ಎನ್ನಲಾಗಿದೆ. ಕರ್ನಾಟಕದ ಮಾದರಿಯನ್ನು ಅಧ್ಯಯನ ಮಾಡುವಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ನೀತಿ ಆಯೋಗವು ಸೂಚಿಸಿದೆ.

ಬಡತನ ರೇಖೆಗಿಂತ ಮೇಲಿರುವ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ರಮದ ಬಗ್ಗೆ ಕರ್ನಾಟಕ ಸರ್ಕಾರವು 2013ರಲ್ಲಿಯೇ ಯೋಚಿಸಿತ್ತು. 2015ರಲ್ಲಿ ರಾಜೀವ್‌ ಆರೋಗ್ಯ ಭಾಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವರ್ಷದ ಬಳಿಕ ಈ ಯೋಜನೆಯಲ್ಲಿ ರೈತ ಕುಟುಂಬಗಳನ್ನೂ ಸೇರಿಸಲಾಯಿತು.

ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮತ್ತು ರಾಜ್ಯ ಮಟ್ಟದ ಆರೋಗ್ಯ ಸಂಸ್ಥೆಗಳ ಹೊಸ ಸ್ವರೂಪವನ್ನು ರೂಪಿಸುವಾಗ ಕರ್ನಾಟಕದ ಮಾದರಿಯು ಅಧ್ಯಯನಯೋಗ್ಯವಾಗಿದೆ ಎಂದು ‘ನವಭಾರತದಲ್ಲಿ ಆರೋಗ್ಯ ವ್ಯವಸ್ಥೆ’ ಎಂಬ ವರದಿಯಲ್ಲಿ ನೀತಿಆಯೋಗ ಹೇಳಿದೆ.

ADVERTISEMENT

ಬಡ ಜನರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ ಸೌಲಭ್ಯ ದೊರೆಯುತ್ತದೆ. ಮಧ್ಯಮ ವರ್ಗದ ಜನರಿಗೆ ಆರೋಗ್ಯಸೇವೆ ಒದಗಿಸುವ ಯೋಜನೆಯ ರೂಪುರೇಷೆ ನಿರ್ಧರಿಸುವುದು ಈ ವರದಿಯ ಉದ್ದೇಶ. ದೇಶದ ಶೇ 50ರಷ್ಟು ಜನರು ಈಗಲೂ ಸರ್ಕಾರದ ಯಾವುದೇ ಆರೋಗ್ಯ ಸೇವೆ ಯೋಜನೆಯ ಅಡಿಯಲ್ಲಿ ಬರುತ್ತಿಲ್ಲ ಎಂದು ನೀತಿ ಆಯೋಗದಸಲಹೆಗಾರ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಆರೋಗ್ಯ ಸುಧಾರಣೆ

ಕರ್ನಾಟಕದಲ್ಲಿ ಆರೋಗ್ಯ ಸೇವೆ ಸುಧಾರಣೆಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ರಚಿಸಲಾಗಿತ್ತು. ಸುಧಾರಣೆಗಳಿಂದಾಗಿ ಸೋಂಕು ಪ್ರಮಾಣವು ಶೇ 6.74ರಷ್ಟು ಇಳಿಕೆಯಾಗಿದೆ. ಹಾಗೆಯೇ, ಸುದೀರ್ಘ ಅವಧಿಗೆ ಆಸ್ಪತ್ರೆಗೆ ದಾಖಲಾಗಿ ಜನರು ಜೇಬಿನಿಂದ ಪಾವತಿಸುವ ಮೊತ್ತದ ಪ್ರಮಾಣ ಶೇ 64ರಷ್ಟು ಇಳಿಕೆಯಾಗಿದೆ.

ಕರ್ನಾಟಕದ ಜನರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸರಾಸರಿ ದಿನಗಳು 2004ರಲ್ಲಿ ಕ್ರಮವಾಗಿ 8.9 ಮತ್ತು 9 ದಿನಗಳಿದ್ದರೆ, 2014ರಲ್ಲಿ ಅದು 5.6 ಮತ್ತು 6 ದಿನಗಳಿಗೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.