ಯಲಹಂಕ: ‘ಆರೋಗ್ಯ ಸಮಸ್ಯೆಗಳು ಗಂಭೀರ ಸ್ಥಿತಿಗೆ ತಲುಪಿದಾಗ ಆರ್ಥಿಕ ಹೊರೆಯ ಜೊತೆಗೆ ಚಿಕಿತ್ಸೆಗಳೂ ಫಲಕಾರಿಯಾಗದೆ ತೊಂದರೆ ಅನುಭವಿಸಬೇಕಾಗುತ್ತದೆ. ಎಲ್ಲರೂ ಮುಂಜಾಗ್ರತೆವಹಿಸಿ, ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ವಿಶ್ವವಾಣಿ ಫೌಂಡೇಷನ್, ಸಪ್ತಗಿರಿ ಆಸ್ಪತ್ರೆ ಹಾಗೂ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಕೆಲವು ಆಸ್ಪತ್ರೆಗಳು ವ್ಯಾಪಾರಕ್ಕೆ ಇಳಿದಿವೆ. ಜೀವವಿಮೆ ಮತ್ತು ಆಯುಷ್ಮಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ. ಕ್ಷೇತ್ರದಲ್ಲಿ 15 ದಿನಗಳಿಗೊಮ್ಮೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ವಿಶ್ವವಾಣಿ ಫೌಂಡೇಷನ್ ಕಾರ್ಯದರ್ಶಿ ವಾಣಿಶ್ರೀ ವಿಶ್ವನಾಥ್ ಮಾತನಾಡಿ, ‘ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವು, ಉಚಿತವಾಗಿ ಔಷಧಿ ವಿತರಣೆ, ಸಾಮಾನ್ಯ ಹೆರಿಗೆ ಅಥವಾ ಸಿಜೇರಿಯನ್‌ಗೆ ನೆರವು, ಹೊಲಿಗೆತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ಹಾಗೂ ಉಚಿತವಾಗಿ ಹೊಲಿಗೆಯಂತ್ರ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಹೊಲಿಗೆಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್, ಅಂಗವಿಕಲರಿಗೆ ಸಹಾಯಧನದ ಚೆಕ್, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶ್ವವಾಣಿ ಫೌಂಡೇಷನ್ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಪಲ್ಲವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಶ್ರೀನಿವಾಸ್, ಉಪಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ, ಪಿಡಿಒ ನಾಗರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.