ADVERTISEMENT

ಸ್ಥಾಪನೆಗೊಳ್ಳದ ಐಸಿಯು:₹37 ಕೋಟಿ ವೆಚ್ಚ ವ್ಯರ್ಥ!

₹1.32 ಕೋಟಿ ಮೌಲ್ಯದ ಉಪಕರಣ ನಿಷ್ಕ್ರಿಯ l ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 22:55 IST
Last Updated 31 ಆಗಸ್ಟ್ 2021, 22:55 IST

ಬೆಂಗಳೂರು: ರಾಜ್ಯದಲ್ಲಿ ವಿವಿಧ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ (ಐಸಿಯು) ಸ್ಥಾಪನೆಗೆ ಟೆಂಡರ್ ಕರೆದು ಉಪಕರಣಗಳನ್ನು ಸರಿಯಾಗಿ ಪೂರೈಸದೇ ಮತ್ತು ಐಸಿಯುಗಳನ್ನು ಆರಂಭಿಸದ ಕಾರಣ ಅದಕ್ಕಾಗಿ ಮಾಡಿದ ₹37.46 ಕೋಟಿ ವೆಚ್ಚವು ವ್ಯರ್ಥವಾಗಿದೆ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಹೇಳಿದೆ.

ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ 2016 ರಲ್ಲಿ ಉಪಕರಣಗಳ ಖರೀದಿಯ ಬಗ್ಗೆ ಚರ್ಚೆ ನಡೆಯಿತು. ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು ಎಂದು ಮೂಲಗಳು ಹೇಳಿವೆ.

ಆರಂಭದಲ್ಲಿ ₹20.78 ಕೋಟಿ ವೆಚ್ಚದಲ್ಲಿ 21 ಜಿಲ್ಲಾ ಮತ್ತು 25 ತಾಲ್ಲೂಕುಗಳ ಆಸ್ಪತ್ರೆಗಳಿಗೆ ಐಸಿಯು ಉಪಕರಣಗಳನ್ನು ಖರೀದಿಸಲು 2016 ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಆ ಬಳಿಕ ಟೆಂಡರ್‌ ಅನ್ನು ತಿದ್ದುಪಡಿ ಮಾಡಿ, ₹37.46 ಕೋಟಿ ಅಂದಾಜು ವೆಚ್ಚದಲ್ಲಿ 21 ಜಿಲ್ಲಾ ಆಸ್ಪತ್ರೆಗಳು ಮತ್ತು 146 ತಾಲ್ಲೂಕು ಆಸ್ಪತ್ರೆಗಳಿಗೆ ಉಪಕರಣ ಖರೀದಿ ಮಾಡಲು ತೀರ್ಮಾನಿಸಲಾಗಿತ್ತು.

ADVERTISEMENT

ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ನಾಲ್ಕು ಐಸಿಯು ಮಂಚಗಳು, ನಾಲ್ಕು ಮಲ್ಟಿಪ್ಯಾರಾ ಮಾನಿಟರ್‌ಗಳು ಮತ್ತು ಎರಡು ವೆಂಟಿಲೇಟರ್‌ಗಳ ಬದಲಿಗೆ ತಲಾ ಮೂರು ಮಂಚಗಳು, ಎರಡು ಮಾನಿಟರ್‌ಗಳು ಮತ್ತು ಒಂದು ವೆಂಟಿಲೇಟರ್‌ಗಳನ್ನು ಖರೀದಿಸಲಾಗಿತ್ತು.

ನಂತರದ ಹಂತದಲ್ಲಿ ಗುರುತಿಸಿದ 121 ಹೆಚ್ಚುವರಿ ತಾಲ್ಲೂಕು ಆಸ್ಪತ್ರೆಗಳಿಗೆ 100 ಎಂ.ಎ ಪೋರ್ಟಬಲ್‌ ಎಕ್ಸ್‌ರೇ ಯಂತ್ರಗಳು, ಹೈಫ್ಲೋ ನಾಸಲ್‌ ಕ್ಯಾನುಲಾ (ಸಿ–ಪಾಪ್) ಉಪಕರಣ, ಇನ್‌ಫ್ಯೂಷನ್‌ ಪಂಪ್‌ ಮತ್ತು ಎಮರ್ಜೆನ್ಸಿ ಟ್ರಾಲಿಯನ್ನು ಇಂಡಿಯನ್‌ ಸೊಸೈಟಿ ಆಫ್‌ ಕ್ರಿಟಿಕಲ್ ಕೇರ್‌ ಮೆಡಿಸಿನ್‌ನಿಂದ ಹೊರಡಿಸಲಾಗದ ಮಾರ್ಗಸೂಚಿಯಲ್ಲಿ ಕಡ್ಡಾಯಗೊಳಿಸಿದ್ದರೂ ಸರಬರಾಜು ಮಾಡಲಿಲ್ಲ ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು.

ಐಸಿಯು ಸ್ಥಾಪನೆಗೆ ಗುರುತಿಸಲಾಗಿದ್ದ ಒಟ್ಟು 21 ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಮಂಚಗಳು, ಮಲ್ಟಿಪಾರಾ ಮಾನಿಟರ್‌ಗಳು, ವೆಂಟಿಲೇಟರ್‌ಗಳು, ಡಿಫಿಬ್ರಿಲೇಟರ್‌ಗಳು, ಇಸಿಜಿ ಯಂತ್ರ, ಸಕ್ಷನ್‌ ಆಪರೇಟಸ್‌ ಮತ್ತು ಕ್ರ್ಯಾಶ್‌ ಕಾರ್ಟ್ಸ್‌ಗಳನ್ನು ಸರಬರಾಜು ಮಾಡದ ಕಾರಣ ಐಸಿಯುಗಳನ್ನು ಸ್ಥಾಪಿಸಿರಲಿಲ್ಲ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಬಂಗಾರಪೇಟೆ, ಚನ್ನರಾಯಪಟ್ಟಣ, ಮುಳಬಾಗಿಲು, ನಂಜನಗೂಡು ಮತ್ತು ಧಾರಾವಾಡ ಜಿಲ್ಲಾ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ಸ್ಥಾಪಿಸಲಾಗಿದ್ದ ಐಸಿಯುಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಸರ್ಕಾರ ಭರಿಸಿದ ವೆಚ್ಚವು ವ್ಯರ್ಥವಾಗಿದೆ ಎಂದು ಮಹಾಲೇಖಪಾಲರೂ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸಭೆಗೆ ತಿಳಿಸಲಾಯಿತು.

ಆರು ಆಸ್ಪತ್ರೆಗಳಲ್ಲಿ ₹1.32 ಕೋಟಿ ಮೌಲ್ಯದ ರಕ್ತದ ವಿಭಜಕ ಘಟಕ, ಟೆಲಿಮೆಡಿಸಿನ್‌ ಉಪಕರಣಗಳು, ಅಲ್ಟ್ರಾ ಸೌಂಡ್‌ ಸ್ಕ್ಯಾನರ್‌ಗಳು ಮುಂತಾದ ಸಾಧನಗಳಿಗೆ ನಿಷ್ಕ್ರಿಯವಾಗಿವೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.