ADVERTISEMENT

ಆರೋಗ್ಯ ವೈದ್ಯಾಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 21:29 IST
Last Updated 11 ಏಪ್ರಿಲ್ 2021, 21:29 IST
ಪಕ್ಷದ ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಬಸ್‌ ನಿಲ್ದಾಣದಲ್ಲಿ ಸೋಂಕು ನಿವಾರಕ ಸಿಂಪಡಿಸಿದರು
ಪಕ್ಷದ ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಬಸ್‌ ನಿಲ್ದಾಣದಲ್ಲಿ ಸೋಂಕು ನಿವಾರಕ ಸಿಂಪಡಿಸಿದರು   

ಬೆಂಗಳೂರು: ಕೋವಿಡ್‌ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇರೆಗೆ ಯಲಹಂಕ ವಲಯದ ಕೊಡಿಗೆಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಇಬ್ಬರುನೌಕರರನ್ನು ಬಿಬಿಎಂಪಿಯು ಸೇವೆಯಿಂದ ವಜಾ ಮಾಡಿದೆ. ಕೋವಿಡ್ ಪರೀಕ್ಷಾ ಕಾರ್ಯದ ಉಸ್ತುವಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಈ ಪಿಎಚ್‌ಸಿಯ ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರೇಮಾನಂದ ಅವರನ್ನು ಪಾಲಿಕೆ ಅಮಾನತು
ಮಾಡಿದೆ.

ಕೊಡಿಗೆಹಳ್ಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆಗಾಗಿ ಜನರ ಮೂಗಿನ ದ್ರವ ಸಂಗ್ರಹಿಸುವ ಕೆಲಸಕ್ಕೆ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡಿದ್ದ ನಾಗರಾಜು ಹಾಗೂ ಹೇಮಂತ್ ವಜಾಗೊಂಡವರು.

ಕೊಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೌಕರರಿಬ್ಬರು ಕೋವಿಡ್ ಪರೀಕ್ಷೆಗಾಗಿ ಬಂದ ವ್ಯಕ್ತಿಗಳ ಮೂಗಿನ ದ್ರವವನ್ನು ಕಡ್ಡಿಯಿಂದ ಸಂಗ್ರಹಿಸದೆಯೇ, ಆ ಕಡ್ಡಿಗಳನ್ನು ವೈರಾಣು ರವಾನೆ ಪರಿಕರದಲ್ಲಿ (ವಿಟಿಎಂ) ಜೋಡಿಸುವ ಮೂಲಕ ವಂಚನೆ ನಡೆಸುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಪರಿಶೀಲಿಸಿದಾಗ ಮೂಗಿನ ದ್ರವ ಸಂಗ್ರಹಿಸುವ ಸಿಬ್ಬಂದಿ ತಪ್ಪೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.

ADVERTISEMENT

ಎಫ್‌ಐಆರ್‌ ದಾಖಲು: ‘ನಾಗರಾಜು ಹಾಗೂ ಹೇಮಂತ್‌ ತಾವು ಪಿಎಚ್‌ಸಿಯಲ್ಲಿ ಇಲ್ಲದೇ ಇದ್ದಾಗ ಕೋವಿಡ್‌ ಪರೀಕ್ಷೆ ನಡೆಸುವಾಗ ಅಕ್ರಮ ನಡೆಸಿದ್ದಾರೆ’ ಎಂದು ಆರೊಪಿಸಿ ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರೇಮಾನಂದ ಅವರು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.