ADVERTISEMENT

ಮನೆಗೆಲಸದ ಕುಟುಂಬಗಳಿಗೆ ಆರೋಗ್ಯ ವಿಮೆ: ಡಾ. ದೇವಿ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 16:05 IST
Last Updated 31 ಮೇ 2025, 16:05 IST
ನಗರದಲ್ಲಿ ಶನಿವಾರ  ಆಶ್ರಯ ಹಸ್ತ ಟ್ರಸ್ಟ್‌ನ (ಎಚ್‌ಟಿಯು) 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸುಧಾಮೂರ್ತಿ ಅವರನ್ನು ಡಾ. ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು 
ನಗರದಲ್ಲಿ ಶನಿವಾರ  ಆಶ್ರಯ ಹಸ್ತ ಟ್ರಸ್ಟ್‌ನ (ಎಚ್‌ಟಿಯು) 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸುಧಾಮೂರ್ತಿ ಅವರನ್ನು ಡಾ. ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು    

ಬೆಂಗಳೂರು: ಕಡು ಬಡವರಿಗೂ ಸಮಗ್ರ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾರಾಯಣ ಹೃದಯಾಲಯ ಮನೆಗೆಲಸ ಮಾಡುವ ಐದು ಸಾವಿರ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸಲು ಕಾರ್ಯೋನ್ಮುಖವಾಗಿದೆ ಎಂದು ನಾರಾಯಣ ಹೆಲ್ತ್‌ ಸಂಸ್ಥೆ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಇನ್ಫೋಸಿಸ್ ಸಹ ಸಂಸ್ಥಾಪಕ ಕೆ.ದಿನೇಶ್ ಅವರ ಆಶ್ರಯ ಹಸ್ತ ಟ್ರಸ್ಟ್‌ನ (ಎಚ್‌ಟಿಯು) 25ನೇ ವಾರ್ಷಿಕೋತ್ಸವದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ದೇಶದ ಪ್ರಮುಖ 12 ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಾರಾಯಣ ಹೆಲ್ತ್‌ ಸಂಸ್ಥೆಗೆ ವಿಮಾ ಕಂಪನಿ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಮನೆಗೆಲಸ ಮಾಡುವ ಐದು ಸಾವಿರ ಕುಟುಂಬದವರಿಗೆ ಅತಿ ಕಡಿಮೆ ವಂತಿಕೆಯಲ್ಲಿ ಆರೋಗ್ಯ ವಿಮೆ ಒದಗಿಸಲು ತೀರ್ಮಾನಿಸಿದೆ. ಕ್ರಮೇಣ ಈ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದರು.

ADVERTISEMENT

36 ವರ್ಷಗಳ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಗೆ ₹1.55 ಲಕ್ಷ ವೆಚ್ಚವಾಗುತ್ತಿತ್ತು. ಇದೀಗ ₹60 ಸಾವಿರ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಸಾಧ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದ್ದು, ಆರೋಗ್ಯ ಸೇವೆಗಳು ಕೈಗೆಟುಕುತ್ತಿವೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮಾತನಾಡಿ, ‘ಆಶ್ರಯ ಹಸ್ತ’ ಅಗತ್ಯವಿರುವವರ ಶ್ರೇಯೋಭಿವೃದ್ದಿಗೆ ನೆರವಾಗುತ್ತಿದೆ. ಎಷ್ಟೇ ಹಣ, ಅಧಿಕಾರ, ಅಂತಸ್ತು ಇದ್ದರೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳದಿದ್ದರೆ ನೆಮ್ಮದಿ ದೊರೆಯುವುದಿಲ್ಲ. ಮತ್ತೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವ, ನೋವು ಆಲಿಸುವ, ಕಣ್ಣೀರು ಒರೆಸುವ ಕೆಲಸವನ್ನು ಮಾಡಿದರೆ ಜೀವನದಲ್ಲಿ ಆತ್ಮತೃಪ್ತಿ ದೊರೆಯುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾನವೀಯ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ನುಡಿದರು.

ಆಶ್ರಯ ಹಸ್ತ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕೆ.ದಿನೇಶ್ ಮಾತನಾಡಿ, ಈ ವರ್ಷ ಆರೋಗ್ಯ, ಶಿಕ್ಷಣ, ಜೀವನೋಪಾಯ, ಮಾನಸಿಕ ಆರೋಗ್ಯ, ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಮತ್ತು ವೈದ್ಯಕೀಯ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೆರವು ನೀಡಲಾಗಿದೆ ಎಂದರು.

ಇದೇ ವೇಳೆ ‘ಸಿ’ ಕ್ಯಾಂಪ್ (ಸೆಂಟರ್ ಫಾರ್ ಸೆಲ್ಯೂಲರ್ ಮತ್ತು ಮಾಲಿಕ್ಯುಲಾರ್ ಪ್ಲಾಟ್‌ಫಾರ್ಮ್ಸ್) ನೊಂದಿಗೆ ಹವಾಮಾನ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ಲಿನಿಕಲ್ ಸಂಶೋಧನೆ ಕೈಗೊಳ್ಳುವ ನಿಟ್ಟಿನಲ್ಲಿ ಆಶ್ರಯ ಹಸ್ತ ಟ್ರಸ್ಟ್ ನ ಟ್ರಸ್ಟಿ ಆಶಾ ದಿನೇಶ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ದಿವ್ಯ ದಿನೇಶ್, ದೀಕ್ಷಾ ದಿನೇಶ್, ಆಶ್ರಯ ಹಸ್ತ ಟ್ರಸ್ಟ್‌ನ ಪದಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.