ADVERTISEMENT

ಬೆಂಗಳೂರು: ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 20:30 IST
Last Updated 12 ಅಕ್ಟೋಬರ್ 2021, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಅಕ್ಟೋಬರ್‌ ಆರಂಭದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಈ ತಿಂಗಳಲ್ಲಿ ವಾಡಿಕೆಗಿಂತ ಶೇ 80ರಷ್ಟು ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನಗರದಲ್ಲಿ 2020ರ ಅಕ್ಟೋಬರ್‌ 21ರಂದು 6.7 ಸೆಂ.ಮೀ ಗರಿಷ್ಠ ಮಳೆ ದಾಖಲಾಗಿತ್ತು. ಆದರೆ, ಈ ತಿಂಗಳ 4ರಂದು 6.3 ಸೆಂ.ಮೀ ಮಳೆಯಾಗಿದ್ದು, ಇದೇ ಈವರೆಗಿನ ಗರಿಷ್ಠ ಮಳೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. 2018–19ಕ್ಕೆ ಹೋಲಿಸಿದರೆ, ಈ ಬಾರಿ ಮೊದಲ ವಾರದಲ್ಲೇ ಸರಾಸರಿಗಿಂತ ಹೆಚ್ಚು ಮಳೆ ಸುರಿದಿದೆ. ಮುಂದಿನ ಐದು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.

‘ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ 20 ಸೆಂ.ಮೀ ಆಗಬೇಕಿತ್ತು. ಆದರೆ, 15 ಸೆಂ.ಮೀ ಮಾತ್ರ ಮಳೆ ಸುರಿದಿತ್ತು. ಅ.12ರವರೆಗೆ ಸಾಮಾನ್ಯವಾಗಿ 8 ಸೆಂ.ಮೀ ವಾಡಿಕೆ ಮಳೆ ನಿರೀಕ್ಷಿಸಿದ್ದೆವು. ಆದರೆ, ಈಗಾಗಲೇ 15 ಸೆಂ.ಮೀ ಮಳೆಯಾಗಿದೆ’ ಎಂದು ಹವಾಮಾನ ತಜ್ಞ ಎಚ್‌.ಎಸ್.ಶಿವರಾಮು ವಿವರಿಸಿದರು.

ADVERTISEMENT

‘ಅಕ್ಟೋಬರ್‌ ಪೂರ್ಣ ತಿಂಗಳ ವಾಡಿಕೆ ಮಳೆ ಪ್ರಮಾಣ 16 ಸೆಂ.ಮೀ. ಮೊದಲ ವಾರದಲ್ಲೇ ನಿರೀಕ್ಷಿತ ಮಳೆ ಸುರಿದಿರುವುದರಿಂದ ತಿಂಗಳಾಂತ್ಯದಲ್ಲಿ ಮಳೆ ಪ್ರಮಾಣ ದ್ವಿಗುಣಗೊಳ್ಳುವುದರಲ್ಲಿ ಅನುಮಾನವಿಲ್ಲ’ ಎಂದು ಮಾಹಿತಿ ನೀಡಿದರು.

‘ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಹಿಂಗಾರು ಆರಂಭವಾಗುತ್ತದೆ. ಈ ನಡುವೆ, ಮಳೆಗೆ ವಾರಗಟ್ಟಲೆ ಬಿಡುವು ಇರುತ್ತಿತ್ತು. ಆದರೆ, ಚಂಡಮಾರುತದ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರಿನ ನಡುವೆ ತಡೆ ಇಲ್ಲದೆ, ಮಳೆ ನಿರಂತರವಾಗಿ ಸುರಿಯುತ್ತಿದೆ. ಹಾಗಾಗಿ, ಈ ತಿಂಗಳು ಹೆಚ್ಚು ಮಳೆ ಕಾಣಲಿದ್ದೇವೆ’ ಎಂದೂ ಹೇಳಿದರು.

ಕೆಐಎನಲ್ಲಿ ದಾಖಲೆ ಮಳೆ: ನಗರದ ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಮಂಗಳವಾರ (ಅ.12) 17.8 ಸೆಂ.ಮೀ ಮಳೆಯಾಗಿದೆ. ಇದು ದಾಖಲೆ ಮಳೆ. ಇಲ್ಲಿ 2017ರ ಮೇ 27ರಂದು 8.6 ಸೆಂ.ಮೀ ದಾಖಲೆ ಮಳೆಯಾಗಿತ್ತು’ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

‘ಚಳಿಯ ತೀವ್ರತೆ ಹೆಚ್ಚು’

‘ಅಕ್ಟೋಬರ್ ಕೊನೆಯ ವಾರದಲ್ಲಿ ಚಳಿ ಆರಂಭವಾಗಲಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಈ ಬಾರಿ ಚಳಿಯ ತೀವ್ರತೆಯೂ ಹೆಚ್ಚಾಗಿರಲಿದೆ’ ಎಂದುಎಚ್‌.ಎಸ್.ಶಿವರಾಮು ತಿಳಿಸಿದರು.

17ರವರೆಗೆ ‘ಯೆಲ್ಲೊ ಅಲರ್ಟ್‌’: ಬೆಂಗಳೂರಿನಲ್ಲಿ ಅ.13ರಿಂದ 17ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಐದೂ ದಿನ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.