ಬೆಂಗಳೂರು: ಕೆ.ಆರ್.ಪುರಂನಿಂದ ಸಿಲ್ಕ್ ಬೋರ್ಡ್‌ವರೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ವಿಪರೀತ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದು, ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ.
ದಟ್ಟಣೆ ಅವಧಿಯಾದ ಬೆಳಿಗ್ಗೆ ಹಾಗೂ ಸಂಜೆ ಆಮೆಗತಿಯಲ್ಲಿ ಸಾಗುವ ವಾಹನಗಳ ಸಾಲು, ರಸ್ತೆ ದಾಟಲು ಜನ ಪರದಾಡುವುದು ಸಾಮಾನ್ಯವಾಗಿದೆ. ವಾರಾಂತ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ವಾಹನ ಚಾಲಕರಿಗೆ ದಟ್ಟಣೆಯ ಸಮಸ್ಯೆ ಕಾಡಲಾರಂಭಿಸಿದೆ.
2 ಕಿ.ಮೀ ಪ್ರಯಾಣಿಸಲು ಸುಮಾರು 20ರಿಂದ 30 ನಿಮಿಷ ಬೇಕಾಗುತ್ತದೆ. ಇದರಿಂದ ಉದ್ಯೋಗಿಗಳು ನಿಗದಿತ ಸಮಯಕ್ಕೆ ಕಚೇರಿ ತಲುಪಲು ಹಾಗೂ ವಿದ್ಯಾರ್ಥಿಗಳು ಶಾಲಾ– ಕಾಲೇಜಿಗೆ ತೆರಳಲು ಕಷ್ಟವಾಗಿದೆ.
ನೂರಾರು ಐಟಿ–ಬಿಟಿ ಕಂಪನಿಗಳು ಇಲ್ಲಿಯೇ ನೆಲೆ ಕಂಡಿರುವುದು ಒಂದು ಕಾರಣವಾದರೆ, ಮತ್ತೊಂದೆಡೆ ಜನರಿಗೆ, ಚಾಲಕರಿಗೆ ಅರಿವಿನ ಕೊರತೆಯೂ ದಟ್ಟಣೆ ಹೆಚ್ಚಿಸಿದೆ. ಸಾವಿರಕ್ಕೂ ಅಧಿಕ ಕಂಪನಿಗಳು ಮಾರತ್‌ಹಳ್ಳಿ–ಬೆಳ್ಳಂದೂರು ಭಾಗದಲ್ಲಿವೆ. ಒಂದೇ ಹೊತ್ತಿಗೆ ಈ ಕಂಪನಿಯ ಉದ್ಯೋಗಿಗಳು ಬರುತ್ತಿರುವುದು ದಟ್ಟಣೆ ಹೆಚ್ಚಿಸಿದೆ. ಬಿಎಂಟಿಸಿ ಬಸ್‌ಗಳು ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಿಕೊಳ್ಳಲು ರಸ್ತೆಯಲ್ಲಿ ನಿಲ್ಲುವುದು ಕೂಡ ಸಮಸ್ಯೆಗಳನ್ನು ತಂದೊಡ್ಡಿದೆ.
ನಗರದ ವಿವಿಧ ಭಾಗಗಳಿಂದ ಐಟಿ–ಬಿಟಿ ಕಂಪನಿಗಳಿಗೆ ಉದ್ಯೋಗಕ್ಕಾಗಿ ಬರುವ ಟೆಕಿಗಳು ಈ ರಸ್ತೆ ಮೂಲಕವೇ ಕಚೇರಿಗಳಿಗೆ ತೆರಳುತ್ತಾರೆ. ಕೆಲವರು ಸ್ವಂತ ವಾಹನಗಳಲ್ಲೂ ಬರುತ್ತಾರೆ. ಹಾಗಾಗಿ, ಇಲ್ಲಿ ಜನ–ವಾಹನ ದಟ್ಟಣೆ ಎರಡೂ ಹೆಚ್ಚಾಗಿದೆ.
ನಿತ್ಯ ಬಸ್, ಕಾರು, ದ್ವಿಚಕ್ರ ವಾಹನ ಸೇರಿ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಸರ್ವಿಸ್ ರಸ್ತೆ ಬದಿಯಲ್ಲಿಯೇ ಉದ್ಯೋಗಿಗಳು ಹಾಗೂ ಕ್ಯಾಬ್ ಚಾಲಕರು ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ.
‘ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಡುತ್ತೇನೆ. ಆದರೂ ನಿಗದಿತ ಸಮಯಕ್ಕೆ ಕಚೇರಿ ತಲುಪಲು ಆಗುವುದಿಲ್ಲ. 2 ಕಿಲೋ ಮೀಟರ್ ಪ್ರಯಾಣಿಸಲು ಕನಿಷ್ಠ 20 ನಿಮಿಷ ಬೇಕು. ದಟ್ಟಣೆ ಅವಧಿಯಲ್ಲಿ 30 ನಿಮಿಷ ಬೇಕಾಗುತ್ತದೆ. ದ್ವಿಚಕ್ರ ವಾಹನದಲ್ಲಿಯೇ ಹೀಗಾದರೆ ಬಸ್‌ಗಳಲ್ಲಿ ಸಂಚರಿಸಿದರೆ ಇನ್ನೂ ಅಧಿಕ ಸಮಯ ಬೇಕಾಗುತ್ತದೆ. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡೇ ಸುಸ್ತಾಗಿರುತ್ತೇವೆ’ ಎಂದು ಪಣತ್ತೂರು ನಿವಾಸಿ ರಮೇಶ್ ಅನುಭವ ಹಂಚಿಕೊಂಡರು.
‘ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕೆಂದು ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಐ.ಟಿ– ಬಿ.ಟಿ ಕ್ಷೇತ್ರದಲ್ಲಿ ಹೊರ ರಾಜ್ಯದವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಹೆಚ್ಚಿನವರು ಸ್ವಂತ ವಾಹನಗಳನ್ನೇ ಬಳಸುತ್ತಿರುವ ಪರಿಣಾಮ ಜನರು ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿದೆ’ ಎಂದು ಹೇಳಿದರು.
‘ಶಾಲೆಗಳಿಗೆ ರಜೆ ಇರುವ ಕಾರಣ ಸ್ವಲ್ಪ ಮಟ್ಟಿಗೆ ಸಂಚಾರ ಸಮಸ್ಯೆ ತಗ್ಗಿದೆ. ಹೊರ ವರ್ತುಲ ರಸ್ತೆಯ ಇಬ್ಬಲೂರು ಜಂಕ್ಷನ್‌ನಲ್ಲಿ ಸಮಸ್ಯೆ ತೀವ್ರ. ಪೀಕ್ ಅವರ್‌ನಲ್ಲಿ (ಬೆಳಿಗ್ಗೆ ಮತ್ತು ಸಂಜೆ) ವಾಹನ ಸವಾರರು ಪರದಾಡುತ್ತಿದ್ದಾರೆ. ಕೆಲವೊಮ್ಮೆ ಒಂದು ಕಿಲೋ ಮೀಟರ್‌ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ನಗರದಲ್ಲಿ 1.2 ಕೋಟಿ ವಾಹನಗಳಿದ್ದು, ಪಾರ್ಕಿಂಗ್ ಸಮಸ್ಯೆ ಜಾಸ್ತಿಯಾಗಿದೆ’ ಎಂದು ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದರು.
‘ಸೋಮವಾರ ಬೆಳಿಗ್ಗೆ 8ರ ಹೊತ್ತಿಗೆ ವಾಹನ ದಟ್ಟಣೆ ಶುರುವಾದರೆ ಮಧ್ಯಾಹ್ನದವರೆಗೆ ಇರುತ್ತದೆ. ಮಂಗಳವಾರ ಮತ್ತು ಬುಧವಾರ ವಾಹನ ಜಂಗುಳಿ ನಿರ್ವಹಣೆಯೇ ಕಷ್ಟ’ ಎಂದು ಹೇಳಿದರು.
ಹೊರ ವರ್ತುಲ ರಸ್ತೆಯ ಇಬ್ಬಲೂರು ಜಂಕ್ಷನ್ ಬಳಿಯ ಸಂಚಾರ ದಟ್ಟಣೆ ತಪ್ಪಿಸಲು, ವಿಪ್ರೊ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನಗಳ ಸೀಮಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಮನವಿಯನ್ನು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ತಿರಸ್ಕರಿಸಿದ್ದಾರೆ. ನಗರ ಸಂಚಾರ ತಜ್ಞರು ನಡೆಸಿದ ಪ್ರಾಥಮಿಕ ಮೌಲ್ಯಮಾಪನ ಪ್ರಕಾರ, ವಿಪ್ರೊ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅನುಮತಿ ನೀಡಿದ್ದರೆ ಹೊರ ವರ್ತುಲ ರಸ್ತೆಯಲ್ಲಿನ ದಟ್ಟಣೆ, ವಿಶೇಷವಾಗಿ ದಟ್ಟಣೆ ಅವಧಿಯಲ್ಲಿ ಶೇಕಡ 30ರಷ್ಟು ತಗ್ಗುತ್ತಿತ್ತು.
ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ನಿಗದಿತ ಸಮಯಕ್ಕೆ ಕಚೇರಿಗೆ ತಲುಪಲು ಕಷ್ಟವಾಗುತ್ತದೆ. ನಮ್ಮ ಕಷ್ಟ ಯಾರಿಗೆ ಹೇಳುವುದು?ಅರ್ಜುನ್ ಮಾರತ್‌ಹಳ್ಳಿಯ ಕಂಪನಿ ಉದ್ಯೋಗಿ
ಒಆರ್‌ಆರ್‌ನಲ್ಲಿ ಸಂಚಾರ ಸಮಸ್ಯೆ ಸಾಮಾನ್ಯ. ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿಯೇ ಮಾರತ್‌ಹಳ್ಳಿ ಬೆಳ್ಳಂದೂರು ರಸ್ತೆಗೆ ಆಟೊದವರು ಬರಲು ಹಿಂದೇಟು ಹಾಕುತ್ತಾರೆ.ರಾಜೇಶ್ ಆಟೊ ಚಾಲಕ ಬೆಳ್ಳಂದೂರು
ಮತ್ತಷ್ಟು ದಟ್ಟಣೆ ಹೆಚ್ಚಳ ಸಾಧ್ಯತೆ
‘ಮನೆಯಿಂದ ಕೆಲಸದ (ವರ್ಕ್ ಫ್ರಂ ಹೋಮ್) ವ್ಯವಸ್ಥೆ ಹಾಗೂ ಹೈಬ್ರಿಡ್ ಮಾದರಿಗೆ ತಿಲಾಂಜಲಿ ನೀಡಲು ಕಂಪನಿಗಳು ಮುಂದಾಗಿರುವ ಕಾರಣ ಅಕ್ಟೋಬರ್‌ನಿಂದ ಹೊರ ವರ್ತುಲ ರಸ್ತೆ (ಒಆರ್‌ಆರ್)ಯಲ್ಲಿ ಶೇಕಡ 15ರಷ್ಟು ವಾಹನ ದಟ್ಟಣೆ ಹೆಚ್ಚಾಗಲಿದೆ. ಒಆರ್‌ಆರ್ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾಫ್ಟ್‌ವೇರ್ ಕಂಪನಿಗಳಲ್ಲಿ ಅಂದಾಜು 8ರಿಂದ 10 ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ಕಂಪನಿಗಳು ಹೈಬ್ರಿಡ್ ಮಾದರಿ ಅಳವಡಿಸಿಕೊಂಡಿವೆ. ಅಂದರೆ ವಾರದಲ್ಲಿ ಎರಡು ದಿನ ಮನೆಯಿಂದ ಮತ್ತು ಮೂರು ದಿನ ಕಚೇರಿಯಲ್ಲಿ ಕೆಲಸ ನಿರ್ವಹಿಸುವುದು. ಬುಧವಾರ ಮತ್ತು ಗುರುವಾರ ಅತಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.