
ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಮ್ಮ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದೆ
ಚಿತ್ರ: ರಂಜು ಪಿ
ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಪ್ರಕಾರ 2027ರ ಜೂನ್ ಒಳಗೆ ಮೆಟ್ರೊ ಸಂಚಾರ ಆರಂಭವಾಗಬೇಕು. ಆದರೆ, ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಡೆಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಒಂದೂವರೆ ವರ್ಷದೊಳಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಕೇಂದ್ರ ರೇಷ್ಮೆ ಮಂಡಳಿಯಿಂದ (ಸೆಂಟ್ರಲ್ ಸಿಲ್ಕ್ ಬೋರ್ಡ್) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ ಈ ಮಾರ್ಗದ ಕಾಮಗಾರಿಯು ಎರಡು ಹಂತದಲ್ಲಿ 2024ರ ಒಳಗೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದಾಗಿ ತಡವಾಗಿ ಕಾಮಗಾರಿ ಆರಂಭವಾಗಿದ್ದರಿಂದ 2026ರ ಡಿಸೆಂಬರ್‌ಗೆ ಗಡುವು ವಿಸ್ತರಿಸಲಾಗಿತ್ತು. ಆದರೆ, ಈ ಗಡುವಿನ ಒಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇಲ್ಲ.
ಗಡುವಿನ ಒಳಗೆ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗೆ ಮಾತ್ರ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಸದ್ಯಕ್ಕೆ ಇಟ್ಟುಕೊಂಡಿದೆ. ಉಳಿದ ಕಾಮಗಾರಿ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.
ಕೆ.ಆರ್.ಪುರದಿಂದ ಹೆಬ್ಬಾಳದವರೆಗಿನ ಕಾಮಗಾರಿಗೆ ಹೋಲಿಸಿದರೆ ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಕಾಮಗಾರಿಯು ಸ್ವಲ್ಪ ವೇಗವಾಗಿ ನಡೆಯುತ್ತಿದೆ. ನಿಲ್ದಾಣಗಳ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ಬಹುತೇಕ ಪಿಲ್ಲರ್‌ಗಳ ಕಾಮಗಾರಿ ಮುಗಿದಿದೆ. ಸಿಮೆಂಟಿನ ತೊಲೆಗಳನ್ನು (ಗರ್ಡರ್) ಅಳವಡಿಸಲಾಗಿದೆ.
ಕೊಡಿಗೆಹಳ್ಳಿ, ಜಕ್ಕೂರು, ಯಲಹಂಕ (ಕೋಗಿಲು ಜಂಕ್ಷನ್), ಬಾಗಲೂರು ಕ್ರಾಸ್ ಹೀಗೆ ಕೆಲವು ಕಡೆಗಳಲ್ಲಿ ನಡುನಡುವೆ ಪಿಲ್ಲರ್ ನಿರ್ಮಾಣ ಹಂತದಲ್ಲೇ ಇದೆ.
ಹೊರ ವರ್ತುಲ ರಸ್ತೆಯಲ್ಲಿ ಹೆಚ್ಚು ಮೇಲ್ಸೇತುವೆ ರಸ್ತೆಗಳಿರುವುದರಿಂದ ಕಾಮಗಾರಿ ನಿಧಾನವಾಗಿದೆ. ಮೇಲ್ಸೇತುವೆಗಳನ್ನು ತಪ್ಪಿಸಿಕೊಂಡು ಗರ್ಡರ್ ಅಳವಡಿಸಬೇಕು. ಇಂಥ ಸಮಸ್ಯೆ ಕ್ರೇನ್ ಹೋಗದ ಜಾಗಗಳಲ್ಲಿ ಬೇರೆ ವ್ಯವಸ್ಥೆಗಳನ್ನು ಮಾಡಬೇಕು. ಪ್ರಮುಖ ಜಂಕ್ಷನ್‌ಗಳಲ್ಲಿ ಕಾಂಪೋಸ್ಡ್ ಗರ್ಡರ್, ವೆಬ್ ಗರ್ಡರ್‌ಗಳನ್ನು ಹಾಕಲಾಗುತ್ತಿದೆ. ಇದರಿಂದ ನಿಧಾನವಾಗಿದೆ. ಆದರೆ, ಹೆಬ್ಬಾಳದಿಂದ ವಿಮಾನ ನಿಲ್ದಾಣ ಕಡೆಗೆ ಇಂಥ ಸಮಸ್ಯೆಗಳು ಇಲ್ಲ. ಬಹುತೇಕ ರಸ್ತೆಯ ಪಕ್ಕದಲ್ಲಿ ಸಮಾನಾಂತರವಾಗಿ ಸಾಗುತ್ತಿರುವುದರಿಂದ ಕಾಮಗಾರಿ ಸರಾಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಮ್ಮ ಮೆಟ್ರೊದವರು ಎರಡು ಮೂರು ವರ್ಷಗಳಿಂದ ಬೇಗ ಆಗುತ್ತದೆ ಎಂದು ಕಥೆ ಹೇಳುತ್ತಿರುವುದು ಬಿಟ್ಟರೆ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಇಲ್ಲಿವರೆಗೆ ಕಾಮಗಾರಿ ಸಾಗಿ ಬಂದಿರುವುದನ್ನು ಹಿಂತಿರುಗಿ ನೋಡಿದರೆ ಇನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳುವುದು ಅನುಮಾನ’ ಎಂದು ಕೋಗಿಲು ಕ್ರಾಸ್‌ನ ಅನಿಲ್ ತಿಳಿಸಿದರು.
ಕಾಮಗಾರಿ ವೇಗವಾಗಿ ಪೂರ್ಣಗೊಳಿಸಿ ಮೆಟ್ರೊ ಆರಂಭಗೊಂಡರೆ ವಾಹನ ದಟ್ಟಣೆಯಲ್ಲಿ ಕಾಲ ಕಳೆದು ಹೋಗುವುದು ತಪ್ಪಲಿದೆ. ಸಮಯ ಉಳಿಯಲಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲಿಇಸ್ಮಾಯಿಲ್ ಥಣಿಸಂದ್ರ ನಿವಾಸಿ
ಬಿಐಎಎಲ್‌ನಿಂದ 2 ಮೆಟ್ರೊ ನಿಲ್ದಾಣ!
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗಿನ ನಿಲ್ದಾಣ ಮತ್ತು ವಿಮಾನ ನಗರದಲ್ಲಿರುವ ನಿಲ್ದಾಣವನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ನಿರ್ಮಿಸುತ್ತಿದೆ. ಅದರ ನಿರ್ಮಾಣ ವೆಚ್ಚ ₹ 800 ಕೋಟಿಯನ್ನು ಬಿಐಎಎಲ್ ಭರಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ವಿಮಾನ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ವಿಮಾನ ನಗರದವರೆಗೆ ನೆಲಮಟ್ಟದಲ್ಲಿ ಹಳಿ ಹಾಕಲಾಗಿದೆ. ಎರಡೂ ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ. ಈ ನಿಲ್ದಾಣಗಳೂ ಸೇರಿದಂತೆ ಹೆಬ್ಬಾಳದವರೆಗಿನ ಎಲ್ಲ ಕಾಮಗಾರಿಗಳು 2027ರ ಜೂನ್ ಒಳಗೆ ಮುಗಿದು ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತಿ ವೇಗದ ಮೆಟ್ರೊ
58.19 ಕಿ.ಮೀ. ಉದ್ದದ ನೀಲಿ ಮಾರ್ಗದಲ್ಲಿ 32 ನಿಲ್ದಾಣಗಳಿವೆ. ಅದರಲ್ಲಿ ಕೇಂದ್ರ ರೇಷ್ಮೆ ಮಂಡಳಿಯಿಂದ ಹೆಬ್ಬಾಳದವರೆಗಿನ 29 ಕಿ.ಮೀ. ವ್ಯಾಪ್ತಿಯಲ್ಲಿ 22 ಮೆಟ್ರೊ ನಿಲ್ದಾಣಗಳಿದ್ದರೆ ಅಲ್ಲಿಂದ ವಿಮಾನ ನಿಲ್ದಾಣದವರೆಗೆ 29 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ 10 ಮೆಟ್ರೊ ನಿಲ್ದಾಣಗಳು ಇರಲಿವೆ. ಈ ವ್ಯಾಪ್ತಿಯಲ್ಲಿಯೇ ರೈಲು ‘ಎಕ್ಸ್‌ಪ್ರೆಸ್’ ವೇಗದಲ್ಲಿ ಚಲಿಸಲಿದೆ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಹಸಿರು ಹಳದಿ ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿ.ಮೀ. ‘ಸರಾಸರಿ ವಾಣಿಜ್ಯ ವೇಗ’ದಲ್ಲಿ (ಆವರೇಜ್ ಕರ್ಮಿಷಿಯಲ್ ಸ್ಪೀಡ್) ಚಲಿಸುತ್ತಿವೆ. ಶೀಘ್ರದಲ್ಲಿ ಸಂಚಾರ ಆರಂಭಗೊಳ್ಳಲಿರುವ ಗುಲಾಬಿ ಮಾರ್ಗದಲ್ಲಿ ಮೆಟ್ರೊ ವೇಗವೂ ಇಷ್ಟೇ ಇರಲಿದೆ. ನೀಲಿ ಮಾರ್ಗದಲ್ಲಿ ಕೇಂದ್ರ ರೇಷ್ಮೆ ಮಂಡಳಿಯಿಂದ ಹೆಬ್ಬಾಳದವರೆಗೆ ಅದೇ ವೇಗ ಹೊಂದಿರಲಿದ್ದು ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಗಂಟೆಗೆ 70 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಹಾಗಾಗಿ ಒಟ್ಟು ನೀಲಿ ಮಾರ್ಗದ ಸರಾಸರಿ ವೇಗವು ಗಂಟೆಗೆ 50 ಕಿ.ಮೀ. ಇರುವಂತೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದ್ದಾರೆ.
ನಿಗದಿತ ಸಮಯದಲ್ಲಿ ಪೂರ್ಣ
ಸಿವಿಲ್ ಕಾಮಗಾರಿ ಪೂರ್ಣಗೊಂಡ ಬಳಿಕ ಸೀಮೆನ್ಸ್ ನೇತೃತ್ವದ ಕಂಪನಿಗಳ ಸಮೂಹವು ವಿದ್ದುದ್ದೀಕರಣ ತಂತ್ರಜ್ಞಾನವನ್ನು ಅಳವಡಿಸಲಿದೆ. ಸೂಪರ್ವೈಸರಿ ಕಂಟ್ರೋಲ್ ಆ್ಯಂಡ್ ಡೇಟಾ ಅಕ್ವಿಸಿಷನ್ (ಎಸ್‌ಸಿಎಡಿಎ) ವ್ಯವಸ್ಥೆಗಳನ್ನು ಒಳಗೊಂಡ ರೈಲು ವಿದ್ಯುದ್ದೀಕರಣ ತಂತ್ರಜ್ಞಾನಗಳ ಜೊತೆಗೆ ಡಿಜಿಟಲ್ ಪರಿಹಾರಗಳನ್ನು ವಿನ್ಯಾಸಗೊಳಿಸಲಿದೆ. ಎಲ್ಲ ಕಾಮಗಾರಿಗಳು ಒಂದೂವರೆ ವರ್ಷದ ಒಳಗೆ ಮುಗಿಯಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.