ADVERTISEMENT

ಸಾಕ್ಷಾತ್‌ ಸಮೀಕ್ಷೆ – ಹೆಬ್ಬಾಳ : ಭೈರತಿಯ ‘ಗ್ಯಾರಂಟಿ’ ಕಸಿಯಲು ಕಮಲ ಕಸರತ್ತು

ಹೆಬ್ಬಾಳದಲ್ಲಿ ತ್ರಿಕೋನ ಸ್ಪರ್ಧೆ; ‘ಪಂಚರತ್ನ’ ಮುಂದಿಟ್ಟು ಜೆಡಿಎಸ್ ಜಾಣ್ಮೆಯ ನಡೆ

ಪ್ರಜಾವಾಣಿ ವಿಶೇಷ
Published 3 ಮೇ 2023, 21:08 IST
Last Updated 3 ಮೇ 2023, 21:08 IST
   

ರಾಜೇಶ್‌ ರೈ ಚಟ್ಲ

ಬೆಂಗಳೂರು: ಕಾಂಗ್ರೆಸ್ ಶಾಸಕ ಬಿ.ಎಸ್‌. ಸುರೇಶ್‌ (ಭೈರತಿ) ಎದುರಾಳಿಯಾಗಿ ಬಿಜೆಪಿಯ ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಜಗದೀಶ ಕಟ್ಟಾ ಕೆ.ಎಸ್‌. ಕಣದಲ್ಲಿರುವುದು ಹೆಬ್ಬಾಳ ಕ್ಷೇತ್ರದ ಕದನ ಕುತೂಹಲದ ಕಾವು ಹೆಚ್ಚಿಸಿದೆ. ಜೆಡಿಎಸ್‌ನಿಂದ ಸಯ್ಯದ್‌ ಮೊಹಿದ್ ಅಲ್ತಾಫ್‌ ಅಖಾಡದಲ್ಲಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರೂ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ.

ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬ ಬಗ್ಗೆ ಆರಂಭದಿಂದಲೂ ಗೊಂದಲ ಇರಲಿಲ್ಲ. ಚುನಾವಣೆ ಘೋಷಣೆಗೂ ಮುನ್ನವೇ ಭೈರತಿ ಸುರೇಶ್‌ ಕ್ಷೇತ್ರ ಸುತ್ತಾಡಿ ಮತದಾರರನ್ನು ಓಲೈಸಿ‌ದ್ದಾರೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಮೂಲಕ ಐದು ವರ್ಷಗಳ ತಮ್ಮ ಸಾಧನೆಯ ಕರಪತ್ರಗಳನ್ನು ಹಂಚಿ ಜನರ ಮನಸ್ಸಿನಲ್ಲಿ ಮುದ್ರೆಯೊತ್ತಿದ್ದಾರೆ. ಅವರ ಪರ ಪತ್ನಿ ಪದ್ಮಾವತಿ, ಪುತ್ರ ಸಂಜಯ್ ಕ್ಷೇತ್ರಕ್ಕಿಳಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2018ರಲ್ಲಿ ಕಾಂಗ್ರೆಸ್‌ ತೆಕ್ಕೆಗೆ ತಂದಿರುವ ಸುರೇಶ್‌, ಈ ಬಾರಿ ದಾಖಲೆಯ ಮತಗಳಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ADVERTISEMENT

‘ನಾವು ಮಾಡುವ ಕೆಲಸ ನಮ್ಮನ್ನು ಕೈಹಿಡಿಯುತ್ತದೆ ಎಂಬುದಕ್ಕೆ ಎಲ್ಲೆಡೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲ, ಜನಸ್ಪಂದನೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಶೇ 90 ಅಭಿವೃದ್ಧಿ ಕಾರ್ಯಗಳಾಗಿವೆ. ಈ ಬಾರಿ ಆಯ್ಕೆಯಾದರೆ ಉಳಿದ ಅಭಿವೃದ್ಧಿ ಕಾರ್ಯಗಳ ಜೊತೆಗೆ, ಹೆಬ್ಬಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಇತರರು ಹಿಂತಿರುಗಿ ನೋಡುವಂತೆ ಮಾಡುತ್ತೇನೆ’ ಎನ್ನುವುದು ಅವರ ಭರವಸೆ.

‘ಮೂಲಸೌಕರ್ಯ ವಿಷಯದಲ್ಲಿ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ. ಕುಡಿಯುವ ನೀರು, ಸರ್ಕಾರಿ ಶಾಲೆ, ಆಸ್ಪತ್ರೆ, ವಸತಿ ಹೀಗೆ ನಾನಾ ಕೊರತೆಗಳಿಂದ ನಲುಗಿದ್ದ ಕ್ಷೇತ್ರ ಅಭಿವೃದ್ಧಿಯ ಪಥ ಹಿಡಿದು ಬೆಳೆದಿದೆ. ಇದಕ್ಕೆ ಭೈರತಿ ಸುರೇಶ್‌ ಕೊಡುಗೆ ಸಾಕಷ್ಟಿದೆ’ ಎನ್ನುತ್ತಾರೆ ಮನೋರಾಯನಪಾಳ್ಯದ ದಿನೇಶ್‌.‌ ರಾಜಧಾನಿಗೆ ಸಂಪರ್ಕ ಕೊಂಡಿಯಾಗಿರುವ ಕ್ಷೇತ್ರ ಆಗಿರುವುದರಿಂದ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಫ್ಲೈ ಓವರ್, ರಸ್ತೆಗಳ ವಿಸ್ತರಣೆ, ಒಳಚರಂಡಿ ಮುಂತಾದ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಆ ಹಣ ಅಭಿವೃದ್ಧಿಗೆ ವಿನಿಯೋಗ ಆಗಬೇಕು ಎನ್ನುವುದು ಅವರ ಆಶಯ.

ಇನ್ನು, ಹಿಂದೆ ಕ್ಷೇತ್ರ ಗೆದ್ದು ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರು ಕ್ಷೇತ್ರದಲ್ಲಿ ಮನೆಮಾತು. ಅವರೇ ಬಿಜೆಪಿ ಅಭ್ಯರ್ಥಿ ಆಗಲಿದ್ದಾರೆಂದು ಅನೇಕರು ಭಾವಿಸಿದ್ದರು. ಭೈರತಿ ಸುರೇಶ್‌– ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಡುವಿನ ಗುದ್ದಾಟವನ್ನು ಜನ ನಿರೀಕ್ಷಿಸಿದ್ದರು. ಆದರೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಅವರ ಮಗನಿಗೆ ಬಿಜೆಪಿ ಟಿಕೆಟ್‌ ನೀಡಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಆ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ಬಿಜೆಪಿ ಬೆಂಬಲಿಗ ವಿ. ನಾಗೇನಹಳ್ಳಿಯ ಕೃಷ್ಣಪ್ಪ ಹೇಳಿದರು.

ಹಾಗೆ ನೋಡಿದರೆ, ಜೆಡಿಎಸ್ ಜಾಣ್ಮೆಯ ನಡೆ ಇಟ್ಟಿದೆ. ಕ್ಷೇತ್ರದಲ್ಲಿ ಪ್ರಾಬಲ್ಯವಿರುವ ಮುಸ್ಲಿಂ ಮತದಾರರ ಮೇಲೆ ಕಣ್ಣಿಟ್ಟು ವಿದ್ಯಾವಂತ, ವೃತ್ತಿಯಲ್ಲಿ ವಕೀಲರಾಗಿರುವ ಸಯ್ಯದ್‌ ಮೊಹಿದ್ ಅಲ್ತಾಫ್‌ ಅವರನ್ನು ಕಣಕ್ಕಿಳಿಸಿದೆ.‌ ಮನೆ, ಮನೆ ಪ್ರಚಾರದಲ್ಲಿ ಸಕ್ರಿಯರಾಗಿರುವ ಅವರು, ಪಕ್ಷದ ‘ಪಂಚರತ್ನ‘ ಯೋಜನೆಗಳು ಮತ ತಂದುಕೊಡಬಲ್ಲುದು ಎಂಬ ವಿಶ್ವಾಸದಲ್ಲಿದ್ದಾರೆ.

2008ರಲ್ಲಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, 2013ರಲ್ಲಿ ಬಿಜೆಪಿಯ ಆರ್‌. ಜಗದೀಶ್‌ ಕುಮಾರ್‌ ಇಲ್ಲಿ ಆರಿಸಿ ಬಂದಿದ್ದರು. 2015ರಲ್ಲಿ ಹೃದಯಾಘಾತದಿಂದ ಜಗದೀಶ್‌ ಕುಮಾರ್‌ ನಿಧನರಾಗಿದ್ದರಿಂದ 2016ರಲ್ಲಿ ಉಪ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಸಿ.ಕೆ. ಜಾಫರ್‌ ಷರೀಫ್‌ ಮೊಮ್ಮಗ ಅಬ್ದುಲ್‌ ರೆಹಮಾನ್‌ ಷರೀಫ್‌ ಅವರಿಗೆ ಕಾಂಗ್ರೆಸ್‌ ಮಣೆ ಹಾಕಿತ್ತು. ಆದರೆ, ಮತದಾರರು ಅವರ ಕೈಹಿಡಿಯಲಿಲ್ಲ. 19 ಸಾವಿರ ಮತಗಳ ಅಂತರದಿಂದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಮೇಲುಗೈ ಸಾಧಿಸಿದ್ದರು. ಅದೇ ಗೆಲುವಿನ ಉಮೇದಿನಲ್ಲಿ 2018ರಲ್ಲಿ ನಾರಾಯಣಸ್ವಾಮಿ ಮತ್ತೆ ಕಣಕಿಳಿದಿದ್ದರು. ಅಬ್ದುಲ್‌ ರೆಹಮಾನ್‌ ಷರೀಫ್‌ ಅವರ ಬದಲು, ಕುರುಬ ಸಮುದಾಯದ ಭೈರತಿ ಸುರೇಶ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ತಮ್ಮವರಿಗೆ ಟಿಕೆಟ್‌ ನೀಡಿಲ್ಲ ಎಂಬ ಮುನಿಸಿನ ನಡುವೆಯೂ ಮುಸ್ಲಿಂ ಮತಗಳು ಸುರೇಶ್‌ ಕೈಹಿಡಿದ ಕಾರಣ ಅವರು ಸುಲಭವಾಗಿ ದಡ ಸೇರಿದ್ದರು. ಒಕ್ಕಲಿಗ ಸಮುದಾಯದ ನಾರಾಯಣಸ್ವಾಮಿ ಬಿಜೆಪಿಯಿಂದ, ಹನುಮಂತೇಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು ಕೂಡಾ ಅವರಿಗೆ ವರವಾಗಿತ್ತು. ಕ್ಷೇತ್ರದಲ್ಲಿ ಮುಸ್ಲಿಂ, ಪರಿಶಿಷ್ಟರು ಮತ್ತು ಒಕ್ಕಲಿಗರದ್ದೇ ಪ್ರಾಬಲ್ಯ. ಈ ಬಾರಿಯೂ ಜಾತಿ ಸಮೀಕರಣದ ಲೆಕ್ಕಾಚಾರ ಕ್ಷೇತ್ರದಲ್ಲಿ ಭಾರೀ ಚರ್ಚೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.