ADVERTISEMENT

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 16:24 IST
Last Updated 25 ನವೆಂಬರ್ 2022, 16:24 IST
ಬಿಡಿಎ ನೌಕರರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಉದ್ಘಾಟಿಸಿದರು. ರಾಜ್ಯಸಭೆ ಸದಸ್ಯ ಜಗ್ಗೇಶ್‌, ಬಿಡಿಎ ಆಯುಕ್ತ ಜಿ.ಕುಮಾರ ನಾಯಕ, ಸಂಘದ ಪದಾಧಿಕಾರಿಗಳು ಇದ್ದರು
ಬಿಡಿಎ ನೌಕರರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಉದ್ಘಾಟಿಸಿದರು. ರಾಜ್ಯಸಭೆ ಸದಸ್ಯ ಜಗ್ಗೇಶ್‌, ಬಿಡಿಎ ಆಯುಕ್ತ ಜಿ.ಕುಮಾರ ನಾಯಕ, ಸಂಘದ ಪದಾಧಿಕಾರಿಗಳು ಇದ್ದರು   

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯ ವಿಸ್ತರಿತ ಯೋಜನೆ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಬಿಡಿಎಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಬಿಡಿಎ ನೌಕರರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳು ಹೆಚ್ಚಾಗಿರುವುದರಿಂದ ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನನಿಲ್ದಾಣ ಕಡೆಯಿಂದ ನಗರದ ಕಡೆಗೆ ಇರುವ ಮೇಲ್ಸೇತುವೆ ಜೊತೆಗೆ ಇನ್ನೆರಡು ಪಥಗಳನ್ನು ನಿರ್ಮಿಸಲಾಗುತ್ತದೆ ಎಂದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದು, ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.

₹1 ಸಾವಿರ ಕೋಟಿ ಸಂಗ್ರಹ: ಎರಡು ವರ್ಷಗಳ ಹಿಂದೆ ಬಿಡಿಎ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಭೂ ಕಬಳಿಕೆದಾರರಿಂದ ಆಸ್ತಿಯನ್ನು ವಶಪಡಿಸಿಕೊಂಡು, ನಿವೇಶನಗಳನ್ನು ಹರಾಜು ಮಾಡಲಾಗುತ್ತಿದೆ. ಇದರಿಂದ ಪ್ರಸ್ತುತ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರವಾಗಿದೆ ಎಂದು ಹೇಳಿದರು.

ಬಿಡಿಎ ನೌಕರರು ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಮಾತೃಭಾಷೆಗೆ ಆದ್ಯತೆ ಇರಲಿ: ‘ಮಾತೃಭಾಷೆಯನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ಎಲ್ಲಾ ಪೋಷಕರ ಮೇಲಿದೆ. ನಾವು ನಮ್ಮ ಕನ್ನಡ ಭಾಷೆಯನ್ನು ಮೊದಲು ಕಲಿತು ಸಂಪರ್ಕ ಭಾಷೆಯನ್ನಾಗಿ ಇತರೆ ಭಾಷೆಗಳನ್ನು ಕಲಿಯಲು ಅಡ್ಡಿಯಿಲ್ಲ’ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದರು.

ಬಿಡಿಎ ಆಯುಕ್ತ ಜಿ.ಕುಮಾರ ನಾಯಕ ಮಾತನಾಡಿ, ‘ಬಿಡಿಎದಲ್ಲಿ ಸಾರ್ವಜನಿಕರಿಗಾಗಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕರ್ತವ್ಯ ನಿಭಾಯಿಸಬೇಕು’ ಕರೆ ನೀಡಿದರು.

ಬಿಡಿಎ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಶಿವಶಂಕರ್, ಶ್ರೀನಿವಾಸ್, ಗೋವಿಂದರಾಜು, ಅಧಿಕಾರಿಗಳಾದ ಧನಂಜಯರೆಡ್ಡಿ, ಶಾಂತರಾಜು, ಶಾಂತರಾಜಣ್ಣ, ಡಾ.ಸೌಜನ್ಯ, ನಂಜುಂಡೇಗೌಡ ಇದ್ದರು. ವಿಶ್ವವಾಣಿ ಫೌಂಡೇಷನ್ ವತಿಯಿಂದ ಬಿಡಿಎ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.