ADVERTISEMENT

ಹೆಬ್ಬಾಳ ಜಂಕ್ಷನ್; ಸಮಗ್ರ ಅಭಿವೃದ್ಧಿಗೆ ವಿನ್ಯಾಸ ರೂಪಿಸಿ: BBMP ಮುಖ್ಯ ಆಯುಕ್ತ

ಕೆ.ಆರ್‌. ಪುರದಿಂದ ನಗರದೊಳಗೆ ಸಾಗುವ ಮೇಲ್ಸೇತುವೆ ಪೂರ್ಣ: ಮಹೇಶ್ವರ್‌ ರಾವ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 23:09 IST
Last Updated 21 ಜುಲೈ 2025, 23:09 IST
ಮಹೇಶ್ವರ್‌ ರಾವ್‌ ಹಾಗೂ ಸೀಮಂತ್ ಕುಮಾರ್ ಸಿಂಗ್ ಅವರು ಹೆಬ್ಬಾಳ ಜಂಕ್ಷನ್‌ನಲ್ಲಿ ಕಾಮಗಾರಿಯನ್ನು ಪರಿಶೀಲಿಸಿದರು
ಮಹೇಶ್ವರ್‌ ರಾವ್‌ ಹಾಗೂ ಸೀಮಂತ್ ಕುಮಾರ್ ಸಿಂಗ್ ಅವರು ಹೆಬ್ಬಾಳ ಜಂಕ್ಷನ್‌ನಲ್ಲಿ ಕಾಮಗಾರಿಯನ್ನು ಪರಿಶೀಲಿಸಿದರು   

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಲ್ಲಿ ಸಮಗ್ರ ಅಭಿವೃದ್ಧಿಗಾಗಿ ವಿನ್ಯಾಸ ರೂಪಿಸಿ, ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೆಬ್ಬಾಳ ಜಂಕ್ಷನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿದ ಮಹೇಶ್ವರ್‌ ರಾವ್‌, ‘ಹೆಬ್ಬಾಳ ಜಂಕ್ಷನ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೊದಲನೇ ಹಂತದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕೆ.ಆರ್ ಪುರ ಕಡೆಯಿಂದ ನಗರದೊಳಗೆ ಬರುವ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ದವಿದೆ’ ಎಂದರು.

ಹೆಬ್ಬಾಳ ಜಂಕ್ಷನ್‌ನಲ್ಲಿ ನಮ್ಮ ಮೆಟ್ರೊ ಕಾಮಗಾರಿ, ಕೆ-ರೈಡ್‌ನಿಂದ ಸಬ್ ಅರ್ಬನ್ ರೈಲ್ವೆ ಕಾಮಗಾರಿ, ಪಾಲಿಕೆಯಿಂದ ಸುರಂಗ ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳು ನಡೆಯಲಿದ್ದು, ಇವುಗಳನ್ನು  ದೃಷ್ಟಿಯಲ್ಲಿಟ್ಟುಕೊಂಡು ಜಂಕ್ಷನ್ ಅಭಿವೃದ್ಧಿಗೆ ವಿನ್ಯಾಸ ರೂಪಿಸಬೇಕು ಎಂದು ಸೂಚಿಸಿದರು.

ADVERTISEMENT

ಹೆಬ್ಬಾಳ ಜಂಕ್ಷನ್‌ನಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಸರಿಯಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ, ಒಂದೆಡೆಯಿಂದ ಮತ್ತೊಂದೆಡೆಗೆ ಸುಗಮವಾಗಿ ನಡೆದಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದರು.

ನಾಗವಾರ ಜಂಕ್ಷನ್‌ನಲ್ಲಿ ಮೆಟ್ರೊ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆ ಬಂದರೆ ಜಲಾವೃತವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಹೊಸದಾಗಿ ಪೈಪ್‌ಲೈನ್ ಕಾಮಗಾರಿ ನಡೆಸಿ ನೀರು ನಿಲ್ಲದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆ.ಆರ್. ಪುರ ಮೆಟ್ರೊ ನಿಲ್ದಾಣದ ಬಳಿಯೂ  ಸುಗಮ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡಬೇಕು. ಮೇಲ್ಸೇತುವೆ ಕೆಳಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಹೆಬ್ಬಾಳ ಜಂಕ್ಷನ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ವೇಳೆ ಸಂಚಾರ ಪೊಲೀಸ್ ವಿಭಾಗದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

ನೆಲಮಾಳಿಗೆಯಲ್ಲಿ ಮಳಿಗೆ: ನೋಟಿಸ್‌

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ನೆಲಮಹಡಿಗಳಲ್ಲಿ (ಬೆಸ್ಮೆಂಟ್) ಅನಧಿಕೃತವಾಗಿ ನಿರ್ಮಿಸಿರುವ ಮಳಿಗೆಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ವಾಹನ ಪಾರ್ಕಿಂಗ್‌ಗೆ ಸೀಮಿತ ಇರುವಂತಹ ನೆಲಮಾಳಿಗೆಗಳಲ್ಲಿ ಯಾರೂ ಮಳಿಗೆಗಳನ್ನು ನಿರ್ಮಿಸುವಂತಿಲ್ಲ’ ಎಂದರು. ಮಹದೇವಪುರ ವಲಯದಲ್ಲಿ 52 ಕೆರೆಗಳಿದ್ದು ಎಲ್ಲ ಕೆರೆಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕು. ಕಾಮಗಾರಿಗಳ ನಿರ್ವಹಣೆಗಾಗಿ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಸೂಚಿಸಿದರು.

6.5 ಲಕ್ಷ ಇ–ಖಾತಾ ವಿತರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 25 ಲಕ್ಷ ಸ್ವತ್ತುಗಳ ಪೈಕಿ 6.5 ಲಕ್ಷ ಸ್ವತ್ತುಗಳಿಗೆ ಅಂತಿಮ ಇ-ಖಾತಾ ವಿತರಿಸಲಾಗಿದೆ. ಪೂರ್ವ ವಲಯದಲ್ಲಿ ಒಟ್ಟು 345858 ಸ್ವತ್ತುಗಳ ಪೈಕಿ 55917 ಸ್ವತ್ತುಗಳಿಗೆ ಅಂತಿಮ ಇ-ಖಾತಾ ನೀಡಿದ್ದು ಹೆಬ್ಬಾಳ ವಿಭಾಗದಲ್ಲಿ ಒಟ್ಟು 50 ಸಾವಿರ ಸ್ವತ್ತುಗಳಲ್ಲಿ 13 ಸ್ವತ್ತುಗಳಿಗೆ  ಇ-ಖಾತಾ ನೀಡಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಪ್ರಕಟಣೆ ತಿಳಿಸಿದೆ. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಆರ್.ಟಿ. ನಗರದ ಎಚ್‌ಎಂಟಿ ಮೈದಾನದಲ್ಲಿ ಜುಲೈ 22 ಹಾಗೂ 23ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ‘ಬೃಹತ್ ಇ-ಖಾತಾ ಮೇಳ’ ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.